ಮೈಸೂರು: ಜಾತಿಯ ಶ್ರೇಷ್ಠತೆ ಕಾರಣಕ್ಕೆ ತಾರತಮ್ಯ ಮಾಡುತ್ತಿದ್ದವರ ವಿರುದ್ಧ ಹೋರಾಟ ನಡೆಸಿ ಪುರೋಹಿತಶಾಹಿ ವ್ಯವಸ್ಥೆಯನ್ನು ಖಂಡಿಸಿದ ಶ್ರೇಷ್ಠ ಸಮಾಜ ಸುಧಾರಕ ಬ್ರಹ್ಮ ಶ್ರೀ ನಾರಾಯಣ ಗುರುಗಳು ಎಂದು ಸಮಾಜ ಕಲ್ಯಾಣ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ಹೆಚ್.ಸಿ.ಮಹದೇವಪ್ಪ ಅವರು ತಿಳಿಸಿದರು.
ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಶನಿವಾರ ಕಲಾಮಂದಿರಲ್ಲಿ ಆಯೋಜಿಸಿದ್ದ ಬ್ರಹ್ಮ ಶ್ರೀ ನಾರಾಯಣ ಗುರು ಜಯಂತ್ಯೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ, ನಾರಾಯಣ ಗುರುಗಳ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಸಚಿವರು ಮಾತನಾಡಿದರು.
ತಮ್ಮ ಸೈದ್ದಾಂತಿಕ ನಿಲುವುಗಳ ಮೂಲಕ ಅನಿಷ್ಠ ಪದ್ದತಿಗಳಿಂದ ಕೂಡಿದ್ದ ಕಾಲದಲ್ಲಿ ಸಮಾಜ ಸುಧಾರಣೆಗೆ ಹೋರಾಡಿದ ನಾರಾಯಣ ಗುರುಗಳು, ಜಾತಿಯ ಕಾರಣಕ್ಕೆ ನಿರ್ಲ್ಯಕ್ಷತೆ ಹಾಗೂ ನಿರ್ದಾಕ್ಷಣ್ಯಕ್ಕೆ ಒಳಗಾದವರ ಪರವಾಗಿ ದನಿ ಎತ್ತಿ ಶ್ರೇಷ್ಠ ಚಿಂತಕರಾಗಿದ್ದರು ಎಂದು ಹೇಳಿದರು.
ಅಂದಿನ ಕಾಲದಲ್ಲಿ ಹಿಂದೂ ಧರ್ಮದಲ್ಲಿನ ಮನುವಾದವು ತಳಸ್ತರದ ಜನರನ್ನು ಸೇವೆ ಮಾಡಲೆಂದೇ ಪರಿಗಣಿಸಲಾಗಿತ್ತು. ನಾರಾಯಣ ಗುರುಗಳ ಈ ಅನಿಷ್ಟತೆಗಳ ವಿರುದ್ದ ಪ್ರತಿಭಟಿಸಿದರು. ಅವರ ಹೋರಾಟದ ಪರಿಣಾಮ ಎಲ್ಲರು ಪ್ರಯೋಜನೆ ಪಡೆದಿದ್ದಾರೆ ಎಂದರು.
ಶಿಕ್ಷಣ ನಮ್ಮ ಪ್ರಗತಿಗೆ ದಾರಿ ಎಂದ ಅವರು, ಶಾಲಾ ಹಾಗೂ ಕಾಲೇಜುಗಳನ್ನು ತೆರೆದರು. ಶಿಕ್ಷಣದಿಂದ ನಮ್ಮ ಹಕ್ಕುಗಳನ್ನು ಪಡೆಯಬಹುದು ಎಂದು ಶ್ರಮಿಸಿದರು. ಪ್ರಸ್ತುತ ಕೇರಳ ರಾಜ್ಯವು ಶಿಕ್ಷಣದಲ್ಲಿ ಶೇಖಡ ನೂರರಷ್ಟು ಸಾಧನೆ ಮಾಡಲು ನಾರಾಯಣ ಗುರು ಅವರು ಕಾರಣರಾಗಿದ್ದಾರೆ. ಶೋಷಿತರು ಶಿಕ್ಷಣ ಪಡೆಯುವ ಮೂಲಕ ಸಮಾನತೆ ಸಾಧ್ಯ ಎಂದು ತೋರಿಸಿಕೊಟ್ಟಿದ್ದಾರೆ ಎಂದರು.
ಶಿಕ್ಷಣದ ಮೂಲಕ ವೈಚಾರಿಕತೆ ಮತ್ತು ವೈಜ್ಞಾನಿಕ ಮನೋಭಾವ ಬೆಳೆದು ನಾವು ಸಮಾನತೆಯ ಜೀವನ ನಡೆಸಿ ನಮ್ಮ ಹಕ್ಕುಗಳನ್ನು ಪಡೆಯಲು ನೆರವಾದ ನಾರಾಯಣ ಗುರುಗಳು ಪ್ರೇರಣಾ ಶಕ್ತಿಯಾಗಬೇಕೆ ಹೊರತು ಪೂಜಾ ಶಕ್ತಿಯಾಗಬಾರದು. ತುಳಿತಕ್ಕೊಳಗಾದ ಸಮುದಾಯಗಳು ಸಂಘಟನಾತ್ಮಕ ಹೋರಾಟಕ್ಕೆ ಅಣಿಯಾಗಬೇಕು. ಜಾತಿ ಸಂಕೋಲೆಗಳಿಂದ ಬಿಡುಗಡೆಯಾಗಿ ಸಮಾನತೆ, ಸಮಾನ ಅವಕಾಶಗಳಲ್ಲಿ ನಾವೆಲ್ಲರೂ ಒಂದೇ ಎಂಬ ಭಾವನೆಯಿಂದ ಬದುಕಬೇಕು ಎಂದು ಕರೆ ನೀಡಿದರು.
ಸಮುದಾಯದ ಮುಖಂಡರು ನೀಡಿರುವ ಬೇಡಿಕೆಯನ್ನು ಈಡೇರಿಸಲಾವುಗುದು. ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ನೇತೃತ್ವದ ಸರ್ಕಾರವೆಂದರೆ ಅದು ಬಡವರ, ಹಿಂದುಳಿದವರ, ಶೋಷಿತರ, ರೈತರ, ಹಾಗೂ ಕಾರ್ಮಿಕರ ಮತ್ತು ಅಲ್ಪಸಂಖ್ಯಾತರ ಪರವಾದ ಸರ್ಕಾರ ಎಂದು ಹೇಳಿದರು.
ವಿಧಾನ ಪರಿಷತ್ ಸದಸ್ಯರಾದ ಡಾ.ಡಿ.ತಿಮ್ಮಯ್ಯ ಅವರು ಮಾತನಾಡಿ, ಶೂದ್ರರಿಗೆ ದೇವಸ್ಥಾನ ಪ್ರವೇಶ ನಿರಾಕರಿಸಿದ ಸಂದರ್ಭದಲ್ಲಿ ನಾರಾಯಣ ಗುರುಗಳು ಪ್ರತ್ಯೇಕ ದೇವಸ್ಥಾನ ನಿರ್ಮಿಸಿದರು. ಅಸ್ಪೃಶ್ಯತೆಗೆ ಬೇಸತ್ತು ಕೆಲವರು ಅನ್ಯಧರ್ಮಗಳಿಗೆ ಮತಾಂತರವಾಗುತ್ತಿದ್ದ ಕಾಲಗಟ್ಟದಲ್ಲಿ ಹಿಂದೂ ಧರ್ಮದಲ್ಲಿ ಇದ್ದು, ಸ್ವಾಭಿಮಾನದಿಂದ ಬದುಕುವಂತೆ ಮಾಡಿದರು ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಎಸ್.ಎಸ್.ಎಲ್.ಸಿ ಹಾಗೂ ಪಿಯುಸಿಯಲ್ಲಿ ಹೆಚ್ಚಿನ ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಅಭಿನಂದನಾ ಪತ್ರ ವಿತರಿಸಿ, ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಸೋಲೂರು ಆರ್ಯ ಈಡಿಗ ಮಹಾಸಂಸ್ಥಾನದ ಪೀಠಾಧ್ಯಕ್ಷರಾದ ಶ್ರೀ ವಿಖ್ಯಾತನಂದ ಸ್ವಾಮೀಜಿ, ಶಿವಮೊಗ್ಗದ ನಾರಾಯಣಗುರು ಮಹಾಸಂಸ್ಥಾನದ ಪೀಠಾಧ್ಯಕ್ಷರಾದ ಶ್ರೀ ರೇಣುಕಾನಂದ ಸ್ವಾಮೀಜಿ ಸಾನ್ಯಿಧ್ಯ ವಹಿಸಿದ್ದರು. ವಿಧಾನ ಪರಿಷತ್ ಸದಸ್ಯ ಸಿ.ಎನ್. ಮಂಜೇಗೌಡ, ಗ್ಯಾರಂಟಿ ಯೋಜನೆಗಳ ಉಪಾಧ್ಯಕ್ಷೆ ಡಾ.ಪುಷ್ಪ ಅಮರನಾಥ್, ಜಿಲ್ಲಾಧಿಕಾರಿ ಜಿ.ಲಕ್ಷ್ಮೀಕಾಂತ ರೆಡ್ಡಿ, ಜಿಲ್ಲಾ ಪಂಚಾಯತ್ ಸಿಇಒ ಕೆ.ಎಂ.ಗಾಯಿತ್ರಿ, ಈಡಿಗ ಸಂಘದ ರಾಜ್ಯಾಧ್ಯಕ್ಷ ತಿಮ್ಮೇಗೌಡ, ಜಿಲ್ಲಾಧ್ಯಕ್ಷ ಪೋತರಾಜು, ಆರ್ಯ ಈಡಿಗ ಮಹಿಳಾ ಸಂಘದ ಅಧ್ಯಕ್ಷೆ ಸರೋಜಮ್ಮ, ಪೊಲೀಸ್ ಇಲಾಖೆಯ ನಿವೃತ್ತ ಉಪ ಆಯುಕ್ತ ಬಿ.ಕೆ.ಶಿವರಾಮು, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಜಂಟಿ ನಿರ್ದೇಶಕ ಮಲ್ಲಿಕಾರ್ಜುನಸ್ವಾಮಿ, ಸಹಾಯಕ ನಿರ್ದೇಶಕ ಎಂ.ಡಿ.ಸುದರ್ಶನ್ ಸೇರಿದಂತೆ ಸಮುದಾಯದ ಮುಖಂಡರು ಉಪಸ್ಥಿತರಿದ್ದರು.