ಮನೆ ದೇವಸ್ಥಾನ ಕಿಕ್ಕೇರಿಯ ಬ್ರಹ್ಮೇಶ್ವರ ದೇವಾಲಯ

ಕಿಕ್ಕೇರಿಯ ಬ್ರಹ್ಮೇಶ್ವರ ದೇವಾಲಯ

0

ಸಕ್ಕರೆಯ ನಾಡು ಮಂಡ್ಯ ಜಿಲ್ಲೆಯಲ್ಲಿರುವ ಪುಟ್ಟ ಪಟ್ಟಣ ಕಿಕ್ಕೇರಿ. ಕಿಕ್ಕೇರಿ ಬ್ರಹ್ಮೇಶ್ವರನ ನೆಲೆವೀಡು. ಇಲ್ಲಿ ಹೊಯ್ಸಳರ ಕಾಲದಲ್ಲಿ ನಿರ್ಮಿಸಲಾದ ಭವ್ಯ ವಾಸ್ತು ವೈಭವ ಮತ್ತು ಶಿಲ್ಪಾಲಂಕರಣಗಳಿಂದ ಕೂಡಿದ ಪ್ರಾಚೀನ ಶಿವಾಲಯವಿದೆ. ಶಿವ ಸ್ವಪ್ನದಲ್ಲಿ ನೀಡಿದ ಆಜ್ಞೆಯಂತೆ ಈ ದೇವಾಲಯವನ್ನು ಹೊಯ್ಸಳರ  ಸಾಮಂತರಾಜ ಭರಮಯ್ಯ ನಾಯಕನ  ಮಡದಿ ಬೊಮ್ಮವ್ವ ನಾಯಕಿ ಎಂಬುವವರು 171ರಲ್ಲಿ ಕಟ್ಟಿಸಿದರು ಎಂದು ಇತಿಹಾಸ ಸಾರುತ್ತದೆ.

ಸ್ಥಳ ಪುರಾಣದ ರೀತ್ಯ ಕಿಕ್ಕೇರಿ ಒಂದು ಕಾಲದಲ್ಲಿ ಬ್ರಾಹ್ಮಣರ ಅಗ್ರಹಾರವಾಗಿತ್ತು. ಇಲ್ಲಿ ವೇದಾಧ್ಯಯನ ನಿರಂತರವಾಗಿ ನಡೆದಿತ್ತು. ಹೀಗಾಗಿ ಹಲವು ಪಂಡಿತರು, ಜ್ಞಾನಿಗಳು ಇಲ್ಲಿದ್ದರು. ಅದೇ ಕಾರಣಕ್ಕೆ ಈ ಊರಿಗೆ ಸರ್ವಜ್ಞಪುರಿ ಎಂಬ ಹೆಸರೂ ಇತ್ತಂತೆ. ಪುರಾಣೇತಿಹಾಸದ ಪ್ರಕಾರ ಈ ಊರು ಒಂದು ಕಾಲದಲ್ಲಿ ವನಪ್ರದೇಶದಲ್ಲಿದ್ದ ಈ ದೇವಾಲಯ ಕಾಪಾಲಿಕರು ಅಥವಾ ಅಘೋರಿಗಳ ಬೀಡಾಗಿತ್ತು, ಅವರು ಇಲ್ಲಿ ಕಾಳಿಯನ್ನು ಪೂಜಿಸುತ್ತಿದ್ದರಂತೆ ಹೀಗಾಗಿ ಈ ಊರಿಗೆ ಕಾಳಿಕಾಪುರಿ ಎಂಬ ಹೆಸರೂ ಇತ್ತೆಂದು ಹೇಳುತ್ತಾರೆ. ಇದಕ್ಕೆ ಸಾಕ್ಷಿಯಾಗಿ ದೇವಾಲಯದ ಒಳಗೆ ಮತ್ತು ಹೊರಗೆ ಕಾಲಭೈರವ ಮತ್ತು ಕಾಳಿಕಾ ಮಾತೆಗೆ ಹೆಚ್ಚಿನ ಒತ್ತು ನೀಡಲಾಗಿರುವುದು ಕಂಡುಬರುತ್ತದೆ. ಜೊತೆಗೆ ಶಾಸನಗಳಲ್ಲೂ ಕಾಳಿಕಾಪುರಿ ಮತ್ತು ಸರ್ವಜ್ಞಪುರಿಯ ಪ್ರಸ್ತಾಪ ಇದೆ. ಕೇತನೇರಿ ಕೆರೆಯ ದಂಡೆಯಲ್ಲೇ ಇರುವ ಈ ಊರು ಕಿಕ್ಕೇರಿಯಾಗಿದೆ ಎಂದೂ ಹೇಳಲಾಗುತ್ತದೆ.

ಇಲ್ಲಿ ಕೆರೆಯ ದಂಡೆಯ ಮೇಲೆ ನೋಡಲು ಚಿಕ್ಕದಾದರೂ, ಶಿಲ್ಪ ಕಲಾ ವೈಭವದಿಂದ ಶ್ರೀಮಂತವಾದ ಪೂರ್ವಾಭಿಮುಖವಾದ ಸುಂದರ ಬ್ರಹ್ಮೇಶ್ವರ ದೇವಾಲಯ ಇದೆ. ಇಲ್ಲಿರುವ ಶಿವನಿಗೆ ಬ್ರಹ್ಮೇಶ್ವರ ಎಂದು ಹೆಸರು ಬಂದಿದ್ದು ಹೇಗೆ ಎಂಬ ಬಗ್ಗೆ ಸ್ಥಳ ಪುರಾಣದಲ್ಲಿ ಒಂದು ಸ್ವಾರಸ್ಯಕರ ಕಥೆ ಇದೆ. ಒಮ್ಮೆ ಬ್ರಹ್ಮ ದೇವರಿಗೇ ಬುದ್ಧಿ ವಿಕಲ್ಪವಾಯಿತಂತೆ. ಆಗ ಬ್ರಹ್ಮ ದೇವರು ಶಿವನ ಲಿಂಗವನ್ನು ಪ್ರತಿಷ್ಠಾಪಿಸಿ ಅದಕ್ಕೆ ಪೂಜಿಸಿದ ತರುವಾಯ ಅವರ ಬುದ್ಧಿ ಸರಿಯಾಯಿತಂತೆ. ಬ್ರಹ್ಮ ದೇವರು ಪೂಜಿಸಿದ ಲಿಂಗ ಬ್ರಹ್ಮೇಶ್ವರ ಲಿಂಗ ಆಯಿತು ಎಂದು ಹೇಳಲಾಗುತ್ತದೆ.

ಎಲ್ಲ ಹೊಯ್ಸಳ ದೇವಾಲಯಗಳಂತೆಯೇ ಇದು ಕೂಡ ಎತ್ತರವಾದ ಜಗತಿಯ ಮೇಲೆ ನಿರ್ಮಾಣವಾಗಿದ್ದು ಇದು ಆಮೆಯಾಕಾರದಲ್ಲಿದೆ, ಶ್ರೀ. ಶಂಕರಾಚಾರ್ಯರ ಪಂಚಾಯತನ ತತ್ವದ ಆಧಾರದ ಮೇಲೆ ಈ ದೇವಾಲಯ ನಿರ್ಮಾಣವಾಗಿದೆ ಎಂದು ಅರ್ಚಕರು ಹೇಳುತ್ತಾರೆ. ಇದಕ್ಕೆ ಪೂರಕವಾಗಿ ಇಲ್ಲಿ ಗಣಪತಿ, ಶಿವ, ಅಂಬಿಕೆ (ಮಹಿಷಾಸುರ ಮರ್ದಿನಿ), ಚೆನ್ನಕೇಶವ, ಸೂರ್ಯನಾರಾಯಣನ ಮೂರ್ತಿಗಳು ಇಲ್ಲಿವೆ. ಹೊಯ್ಸಳರ ಶೈಲಿಗಿಂತಲೂ ತುಸು ಭಿನ್ನವಾಗಿ ತಂಜಾವೂರಿನ ಶೈಲಿಯನ್ನೂ ಈ ದೇವಾಲಯ ಒಳಗೊಂಡಿದೆ ಎನ್ನಲಾಗಿದ್ದು, ಇತಿಹಾಸ ಅಧ್ಯಯನಿಗಳಿಗೆ ಇದು ಸ್ವಾರಸ್ಯಕರ ತಾಣವಾಗಿದೆ.

ದೇವಾಲಯವು  ಜಾಲಂದ್ರ, ಸುಖನಾಸಿ, ನವರಂಗ, ನಂದಿ ಮಂಟಪ ಮತ್ತು ಗರ್ಭಗೃಹವನ್ನು ಒಳಗೊಂಡಿದೆ. ಗರ್ಭಗೃಹದ ಮೇಲೆ ಸುಂದರ ಕೆತ್ತನೆಗಳಿಂದ ಕೂಡಿ ಹೊಯ್ಸಳರ ಶೈಲಿಯ ಗೋಪುರವಿದೆ. ದೇವಾಲಯದ ಸುತ್ತ ನಂದಿ ಹಾಗೂ ಕಳಶಗಳಿವೆ. ನವರಂಗದಲ್ಲಿ ಲೇತ್ ನಲ್ಲಿ ತಿರುಗಿಸಿ ಮಾಡಿದ ಸುಂದರ ಕಲ್ಲಿನ ಕಂಬಗಳಿವೆ. ಪ್ರತಿಯೊಂದು ಕಂಬದಲ್ಲಿಯೂ ಇಲ್ಲಿ ಬೇಲೂರಿನಲ್ಲಿದ್ದಂತೆಯೇ ಮೌನ ಮದನಿಕೆಯರ ಸುಂದರ ಶಿಲ್ಪಗಳಿದ್ದವು. ಆದರೆ ಈಗ ಅವುಗಳಲ್ಲಿ ಹಲವನ್ನು ಕಳ್ಳತನ ಮಾಡಲಾಗಿದೆ, ಕೆಲವಷ್ಟೇ ಈಗ ಇಲ್ಲಿ ಉಳಿದಿವೆ. ಇನ್ನು ಭುವನೇಶ್ವರಿಯಲ್ಲಿನ ಕೆತ್ತನೆಗಳು ಮತ್ತು ಅಷ್ಟದಿಕ್ಪಾಲಕರ ಶಿಲ್ಪಗಳು ನಯನ ಮನೋಹರವಾಗಿವೆ. ಗರ್ಭಗುಡಿಯ ಬಾಗಿಲವಾಡದಲ್ಲಿ ಗಜಲಕ್ಷ್ಮೀಯ ಕೆತ್ತನೆ ಇದೆ. ಪಕ್ಕದಲ್ಲಿರುವ ಗೂಡಿನಲ್ಲಿ ಗಣಪತಿ ಮತ್ತು ಮಹಿಷಾಸುರ ಮರ್ದಿನಿಯ (ಅಂಬಿಕೆ) ಶಿಲ್ಪಗಳಿವೆ. ಬಾಗಿಲ ಬಳಿ ದ್ವಾರ ಪಾಲಕರ ವಿಗ್ರಹಗಳೂ ಇವೆ.   ಗರ್ಭಗೃಹದಲ್ಲಿ ಕೃಷ್ಣವರ್ಣದ ಮನೋಹರವಾದ ಶಿವಲಿಂಗವಿದೆ. ನಿತ್ಯ ಪೂಜೆ, ಅಭಿಷೇಕ ನಡೆಯುತ್ತದೆ. ಶಿವನಿಗೆ ಎದುರು, ಹೊರಗೆ ಮುಖ ಮಂಟಪದಲ್ಲಿ ಬಸವನ ವಿಗ್ರಹವಿದೆ. ಬಸವನ ಹಿಂದೆ ಸೂರ್ಯನಾರಾಯಣನ ಮೂರ್ತಿ ಇದೆ. ನವಿಲಿನ ಮೇಲೆ ಕುಳಿತ ಸುಬ್ರಹ್ಮಣ್ಯನ ಮೂರ್ತಿಯಂತೂ ಕಲಾತ್ಮಕತೆಯಿಂದ ಕೂಡಿದೆ.  ಹೊರ ಬಿತ್ತಿಗಳಲ್ಲಿ ಅರೆಕಂಬಗಳು, ಭೂದೇವಿಯನ್ನು ಸಮುದ್ರದಿಂದ ಎತ್ತಿಕೊಂಡು ಬರುತ್ತಿರುವ ವರಾಹಸ್ವಾಮಿ, ಮದನಿಕೆಯರು, ಶಿವಪಾರ್ವತಿ, ದರ್ಪಣ ಸುಂದರಿ, ನಾರಾಯಣ, ನಾಟ್ಯ ಗಣಪತಿ, ಮೊದಲಾದ ಗಮನ ಸೆಳೆಯುವ ಸೂಕ್ಷ್ಮ ಕೆತ್ತನೆಯ ಉಬ್ಬು ಶಿಲ್ಪಗಳಿವೆ.

ಕಾರ್ತೀಕ ಮಾಸದಲ್ಲಿ ಪ್ರತಿ ಸೋಮವಾರ ಮತ್ತು ಶಿವರಾತ್ರಿಯಲ್ಲಿ ಇಲ್ಲಿ ವಿಶೇಷ ಪೂಜೆ ನಡೆಯುತ್ತದೆ.

ಅರಸೀಕೆರೆ ಮೈಸೂರು ರಸ್ತೆಯಲ್ಲಿ  ಮೈಸೂರಿನಿಂದ 68 ಕಿ.ಮೀ., ಕೆ.ಆರ್.ಪೇಟೆಯಿಂದ 14 ಕಿ.ಮೀ. ದೂರದಲ್ಲಿರುವ ಕಿಕ್ಕೇರಿಗೆ ಹೋಗಲು ಸಾಕಷ್ಟು ಬಸ್ ಸೌಲಭ್ಯವಿದೆ. ಸ್ವಂತ ವಾಹನದಲ್ಲಿ ಹೋಗಲು ಒಳ್ಳೆಯ ರಸ್ತೆ ಇದೆ.