ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಫುಟ್‌ಪಾತ್ ಮೇಲೆ ವ್ಯಾಪಾರ ಹಾಗೂ ಶಾಪಿಂಗ್ ಮಾಡುವ ಅಭ್ಯಾಸಕ್ಕೆ ಬ್ರೇಕ್ ಹಾಕಲು ಸರ್ಕಾರ ತೀರ್ಮಾನಿಸಿದೆ. ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ವಿಧಾನಸೌಧದಲ್ಲಿ ಇಂದು ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿ, ಈ ಬಗ್ಗೆ ಮಹತ್ವದ ಘೋಷಣೆ ನೀಡಿದ್ದಾರೆ.
ಡಿಕೆ ಶಿವಕುಮಾರ್ ಅವರು ಹೇಳುವಂತೆ, ಇನ್ನು ಮುಂದೆ ನಗರದ ಯಾವುದೇ ಭಾಗದಲ್ಲಿಯೂ ಸಾರ್ವಜನಿಕರು ನಡೆದಾಡಲು ಇರುವ ಫುಟ್‌ಪಾತ್‌ನಲ್ಲಿ ಶಾಪಿಂಗ್ ಅಥವಾ ವ್ಯಾಪಾರ ನಡೆಯಲು ಅವಕಾಶ ಇರುವುದಿಲ್ಲ. ಈ ತೀರ್ಮಾನವು ನಗರದ ಸಂಚಾರಿ ವ್ಯವಸ್ಥೆ, ಸಾರ್ವಜನಿಕ ಸುರಕ್ಷತೆ ಹಾಗೂ ಪಾದಚಾರಿ ಸಂಚಾರದ ಅನುಕೂಲಕ್ಕಾಗಿ ತೆಗೆದುಕೊಳ್ಳಲಾಗಿದೆ.
ಸಣ್ಣ ಪುಟ್ಟ ವ್ಯಾಪಾರಿಗಳಿಗೆ ಪರ್ಯಾಯ ವ್ಯವಸ್ಥೆಯನ್ನೂ ಸರ್ಕಾರ ಕಲ್ಪಿಸಲು ನಿರ್ಧರಿಸಿದೆ. ಡಿಸಿಎಂ ಹೇಳುವಂತೆ, ತಳ್ಳುವ ಗಾಡಿಗಳ ಮೂಲಕ ನಿರ್ದಿಷ್ಟ ಜಾಗಗಳಲ್ಲಿ ವ್ಯಾಪಾರ ಮಾಡಲು ಅವಕಾಶ ನೀಡಲಾಗುತ್ತದೆ. ಸರ್ಕಾರ ನಾಲ್ಕು ರೀತಿಯ ಗಾಡಿ ಡಿಸೈನ್ ಮಾಡಿಸಿದ್ದೇವೆ. ಈಗಾಗಲೇ 3,000ಕ್ಕೂ ಹೆಚ್ಚು ಜನರು ಈ ಗಾಡಿ ಪಡೆಯಲು ಮನವಿ ಸಲ್ಲಿಸಿರುವುದಾಗಿ ಅವರು ತಿಳಿಸಿದ್ದಾರೆ.
ಡಿಕೆ ಶಿವಕುಮಾರ್ ಮತ್ತೊಂದು ಮಹತ್ವದ ವಿಷಯವನ್ನು ಸ್ಪಷ್ಟಪಡಿಸಿದ್ದಾರೆ. “ನಾಳೆಯಿಂದ ಯಾರೂ ಶಾಸಕರ ಮೂಲಕ ಒತ್ತಡ ತರುವಂತಿಲ್ಲ. ಎಲ್ಲವನ್ನೂ ನಿಯಮಬದ್ಧವಾಗಿ ಮತ್ತು ನ್ಯಾಯೋಚಿತವಾಗಿ ನಡೆಸಲಾಗುತ್ತದೆ” ಎಂಬ ಸೂಚನೆಯನ್ನು ಶಾಸಕರಿಗೆ ನೀಡಿದ್ದಾರೆ. ಯಾವುದೇ ರಾಜಕೀಯ ಒತ್ತಡವನ್ನು ಸಹಿಸದೆ ಈ ಯೋಜನೆ ಮುಂದುವರೆಯಲಿದೆ ಎಂಬ ಉದ್ದೇಶವನ್ನು ಅವರು ತೋರಿಸಿದ್ದಾರೆ.
ಫುಟ್‌ಪಾತ್ ಮೇಲೆ ನಡೆಯುವ ಅಕ್ರಮ ವ್ಯಾಪಾರದಿಂದಾಗಿ ನಗರದ ಸೌಂದರ್ಯ ಹಾಗೂ ಪಾದಚಾರಿಗಳಿಗೆ ತೊಂದರೆ ಆಗುತ್ತಿರುವುದು ನಿಜ. ಈ ಹಿನ್ನೆಲೆಯಲ್ಲಿ ಸರ್ಕಾರ ಈ ನಿರ್ಧಾರ ಕೈಗೊಂಡಿದ್ದು, ನಗರ ವ್ಯವಸ್ಥೆ ಸುಧಾರಣೆಯತ್ತ ದೊಡ್ಡ ಹೆಜ್ಜೆಯೆಂದು ವಿಶ್ಲೇಷಕರ ಅಭಿಪ್ರಾಯ.














