ಮನೆ ಸ್ಥಳೀಯ ಸ್ತನ್ಯಪಾನದಿಂದ ಮಗುವಿಗೆ ರೋಗ ನಿರೋಧಕ ಶಕ್ತಿ ಲಭ್ಯ: ರಾಘವೇಂದ್ರ

ಸ್ತನ್ಯಪಾನದಿಂದ ಮಗುವಿಗೆ ರೋಗ ನಿರೋಧಕ ಶಕ್ತಿ ಲಭ್ಯ: ರಾಘವೇಂದ್ರ

0

ಮೈಸೂರು: ಗ್ರಾಮೀಣ ಶಿಕ್ಷಣ ಮತ್ತು ಆರೋಗ್ಯ ಸಂಸ್ಥೆ ಮೈಸೂರು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮೈಸೂರು ವತಿಯಿಂದ ” ವಿಶ್ವ ಸ್ತನ್ಯಪಾನ ಸಪ್ತಾಹ ಕಾರ್ಯಕ್ರಮ” ವನ್ನು ಕುಪ್ಪೆಗಾಲ ಮತ್ತು ಎಂ.ಸಿ. ಹುಂಡಿ ಗ್ರಾಮ ಗಳು ಮೈಸೂರು ತಾಲೂಕು ಇಲ್ಲಿ ನಡೆಸಲಾಯಿತು.

Join Our Whatsapp Group

ಕಾರ್ಯಕ್ರಮದಲ್ಲಿ ಗ್ರಾಮೀಣ ಶಿಕ್ಷಣ ಮತ್ತು ಆರೋಗ್ಯ ಸಂಸ್ಥೆ ಸಂಯೋಜಕರು ಶಶಿಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡುತ್ತಾ, ವಿಶ್ವದಾದ್ಯಂತ ಆಗಸ್ಟ್ 1ರಿಂದ 7ವರೆಗೆ ವಿಶ್ವ ಸ್ಥನ್ಯಪಾನ ಸಪ್ತಾಹ ಕಾರ್ಯಕ್ರಮ ನಡೆಸಲಾಗುತ್ತದೆ. ಶಿಶುಮರಣ ತಡೆಗಟ್ಟಲು ಹಾಗೂ ಎದೆ ಹಾಲಿನ ಮಹತ್ವ ತಿಳಿಸುವುದು ಈ ಸಪ್ತಾಹದ ಉದ್ದೇಶವಾಗಿದೆ.  ಹುಟ್ಟಿದ ಮಗುವಿಗೆ ಸ್ತನ್ಯಪಾನ ಮಾಡಿಸುವುದರಿಂದ ಮಗುವಿಗೆ ರೋಗ ನಿರೋಧಕ ಶಕ್ತಿ ಹೆಚ್ಚಾಗಲಿದೆ. ಎದೆ ಹಾಲು ಅಮೃತಕ್ಕೆ ಸಮಾನ. ಎದೆ ಹಾಲನ್ನು ಕುಡಿಸುವುದರಿಂದ ಸೌಂದರ್ಯ ಹಾಳಾಗುತ್ತದೆ ಎಂಬುದು ಕೆಲವು ಮಹಿಳೆಯರ ತಪ್ಪು ಕಲ್ಪನೆಯಾಗಿದೆ ಎಂದರು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿ ರಾಘವೇಂದ್ರ, ಸ್ತನ್ಯಪಾನವು ಮಗುವಿಗೆ ದೇವರು ಕೊಟ್ಟ ವರವಾಗಿದ್ದು ಇದರಿಂದ ತಾಯಿ ಹಾಗೂ ಮಗುವಿನ ಆರೋಗ್ಯ ವೃದ್ಧಿಯಾಗುತ್ತದೆ ಎಂದು  ತಿಳಿಸಿದರು.

ತಾಯಿ ಮಗುವಿಗೆ ಎದೆ ಹಾಲುಣಿಸುವುದರಿಂದ ಮಕ್ಕಳ ಸಾವಿನ ಪ್ರಮಾಣ ಕಡಿಮೆಯಾಗುತ್ತದೆ.  ಮಗುವು ಶಕ್ತಿಯುತವಾಗಿ ಬೆಳೆಯಲು ಸಾಧ್ಯವಾಗುತ್ತದೆ. ಮಗುವಿಗೆ ತಾಯಿಯ ಹಾಲು ಸೋಂಕು ನಿವಾರಕ ಪ್ರಥಮ ಲಸಿಕೆಯಾಗಿದ್ದು, ತಾಯಿ ಮತ್ತು ಮಗುವಿನ ಬಾಂಧವ್ಯವನ್ನು ಹೆಚ್ಚಿಸುವ ಪ್ರಕ್ರಿಯೆಯಾಗಿದೆ. ತಾಯಿ ಹಾಲು ಮಗುವಿನಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಿಸುವುದಲ್ಲದೆ ತಾಯಿಯ ಆರೋಗ್ಯವನ್ನೂ ಕಾಪಾಡುತ್ತದೆ ಎಂದರು. ತಾಯಿಯ ಹಾಲು ಮಗುವಿಗೆ ಸಂಜೀವಿನಿ ರೂಪದಲ್ಲಿ ರೋಗ ನಿರೋಧಕ ಅಂಶಗಳನ್ನು ಒಳಗೊಂಡಿರುತ್ತದೆ. ಉತ್ತಮವಾದ ಪೌಷ್ಟಿಕಾಂಶಗಳಿಂದ ಕೂಡಿರುತ್ತದೆ, ಇದರಿಂದ ಮಗುವು ದೈಹಿಕವಾಗಿ ಹಾಗೂ ಮಾನಸಿಕವಾಗಿ ಸದೃಢವಾದ ಬೆಳವಣಿಗೆಗೆ ಪೂರಕವಾಗಿರುತ್ತದೆ. ತಾಯಂದಿರು ತಮ್ಮ ಮಕ್ಕಳಿಗೆ ಕನಿಷ್ಠ 6 ತಿಂಗಳಾದರೂ ಹಾಲನ್ನು ಕುಡಿಸಬೇಕು ಎಂದರು.

ಸುನೀತಾ ಮತ್ತು ಶ್ರೀಮತಿ ಸರೋಜಾ ಅಂಗನವಾಡಿ ಮೇಲ್ವಿಚಾರಕರು, ಉಮಾಮಣಿ, ಜ್ಯೋತಿ ಸಮುದಾಯ ಆರೋಗ್ಯ ಶಿಕ್ಷಣಾಧಿಕಾರಿಗಳು, ಗ್ರಾಮ ಪಂಚಾಯ್ತಿ ಅಧ್ಯಕ್ಷರು, ಸದಸ್ಯರು, ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರು  ಪಾಲ್ಗೊಂಡಿದ್ದರು.