ಒಬ್ಬ ವ್ಯಕ್ತಿ ಮದ್ಯ ಸೇವಿಸಿದ್ದಾರೆ ಎಂಬುದಕ್ಕೆ ಉಸಿರಾಟ ವಿಶ್ಲೇಷಣಾ ವರದಿ ನಿರ್ಣಾಯಕ ಪುರಾವೆಯಾಗದು ಎಂದು ಪಾಟ್ನಾ ಹೈಕೋರ್ಟ್ ಈಚೆಗೆ ಹೇಳಿದೆ.
ಒಬ್ಬ ವ್ಯಕ್ತಿ ಮದ್ಯ ಸೇವಿಸಿದ್ದಾರೆಯೇ ಅಥವಾ ಇಲ್ಲವೇ ಎಂಬುದನ್ನು ಖಚಿತಪಡಿಸಿಕೊಳ್ಳಲು ರಕ್ತದ ಮಾದರಿ ಮತ್ತು ಮೂತ್ರ ಪರೀಕ್ಷೆ ನಡೆಸುವುದು ಸರಿಯಾದ ವಿಧಾನ ಎಂದು ನ್ಯಾಯಮೂರ್ತಿ ಬಿಬೇಕ್ ಚೌಧರಿ ಅವರಿದ್ದ ಏಕಸದಸ್ಯ ಪೀಠ ತಿಳಿಸಿದೆ.
“ಅರ್ಜಿದಾರರು ಮತ್ತು ಸರ್ಕಾರಿ ವಕೀಲರನ್ನು ಆಲಿಸಿದ ನಂತರ ಮತ್ತು ದಾಖಲೆಯಲ್ಲಿರುವ ಸಂಪೂರ್ಣ ಸಾಕ್ಷ್ಯವನ್ನು ಪರಿಶೀಲಿಸಿದ ನಂತರ, ಉಸಿರಾಟ ವಿಶ್ಲೇಷಣಾ ವರದಿಯು ವ್ಯಕ್ತಿಯೊಬ್ಬರು ಮದ್ಯ ಸೇವಿಸಿದ ನಿರ್ಣಾಯಕ ಪುರಾವೆಯಲ್ಲಎಂದು ದಾಖಲಿಸಲು ನ್ಯಾಯಾಲಯ ಇಚ್ಛಿಸುತ್ತದೆ” ಎಂಬುದಾಗಿ ನ್ಯಾಯಾಲಯ ಹೇಳಿದೆ.
ಸೇವೆಯಿಂದ ವಜಾಗೊಂಡ ಕಿಶನ್‌ಪುರದ ಉಪವಿಭಾಗೀಯ ಕಚೇರಿಯ ಗುಮಾಸ್ತರೊಬ್ಬರ ಪತ್ನಿ ಸಲ್ಲಿಸಿದ್ದ ಮನವಿಯ ಹಿನ್ನೆಲೆಯಲ್ಲಿ ಈ ಆದೇಶ ನೀಡಲಾಗಿದೆ.
ಮದ್ಯದ ಅಮಲಿನಲ್ಲಿ ಕೆಲಸಕ್ಕೆ ಹಾಜರಾದ ನೌಕರನನ್ನು ಬಂಧಿಸಲಾಗಿತ್ತು. ವಿಚಾರಣೆ ಬಾಕಿ ಇರುವಂತೆಯೇ ಆತ ಮೃತಪಟ್ಟಿದ್ದರು. ತಮ್ಮ ಪತಿ ಅಂದು ಶೀತ ಮತ್ತು ಕೆಮ್ಮಿನಿಂದ ಬಳಲುತ್ತಿದ್ದರು. ಹೀಗಾಗಿ ಆಲ್ಕೋಹಾಲ್‌ಯುಕ್ತ ಕೆಮ್ಮಿನ ಸಿರಪ್ ಸೇವಿಸಿದ್ದರು ತನ್ನ ಪತಿಯ ರಕ್ತ ಮತ್ತು ಮೂತ್ರದ ಮಾದರಿ ಪರೀಕ್ಷಿಸದೆಯೇ ಅವರು ಮದ್ಯ ಸೇವಿಸಿದ್ದಾರೆಂದು ನಿರ್ಣಯಿಸಲಾಗಿತ್ತು ಎಂದು ಗುಮಾಸ್ತನ ಪತ್ನಿ ಹೇಳಿದ್ದರು.
ಪ್ರಸ್ತುತ ಪ್ರಕರಣದಲ್ಲಿ ಗುಮಾಸ್ತನನ್ನು ಬಂಧಿಸಿದಾಗ ಆತ ತೂರಾಡುತ್ತಿದ್ದರು, ತೊದಲುತ್ತಿದ್ದರು, ಇಲ್ಲವೇ ತೇಲುಗಣ್ಣು ಮಾಡುತ್ತಿದ್ದರು ಎನ್ನುವುದಕ್ಕೆ ಸಂಬಂಧಿಸಿದಂತೆ ಯಾವುದೇ ಆರೋಪವಿಲ್ಲ. ಕೇವಲ ಮದ್ಯದ ವಾಸನೆ ಬಡಿದ ಮಾತ್ರಕ್ಕೆ ವ್ಯಕ್ತಿ ಮದ್ಯ ಸೇವಿಸಿದ್ದಾನೆ ಎಂದು ನಿರ್ಣಯಿಸಲಾಗದು ಎಂಬುದಾಗಿ ಸುಪ್ರೀಂ ಕೋರ್ಟ್ ತೀರ್ಪು ನೀಡಿದೆ. ಇದನ್ನು ಪರಿಗಣಿಸಲು ಶಿಸ್ತು ಪ್ರಾಧಿಕಾರ ವಿಫಲವಾಗಿದ್ದು ಶಿಕ್ಷೆಯ ಆದೇಶ ಕೇವಲ ಉಸಿರಾಟ ಪರೀಕ್ಷೆಯನ್ನಷ್ಟೇ ಆಧರಿಸಿದೆ. ಇದು ನಿರ್ಣಾಯಕ ವರದಿ ಎಂದು ಹೇಳಲಾಗದು ಎಂಬುದಾಗಿ ಜೂನ್ 19ರಂದು ನೀಡಿದ ಆದೇಶದಲ್ಲಿ ನ್ಯಾಯಾಲಯ ತಿಳಿಸಿದೆ.