ಮಂಗಳೂರು: ಗುತ್ತಿಗೆ ಕಾಮಗಾರಿ ಬಿಲ್ ಮಂಜೂರಾತಿಗೆ ಲಂಚ ಪಡೆಯುತ್ತಿರುವಾಗಲೇ ಕಿನ್ನಿಗೋಳಿ ಪಟ್ಟಣ ಪಂಚಾಯತ್ ಜೂನಿಯರ್ ಇಂಜಿನಿಯರ್, ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ರೆಡ್ ಹ್ಯಾಂಡ್ ಆಗಿ ಲೋಕಾಯುಕ್ತರಿಗೆ ಸಿಕ್ಕಿಬಿದ್ದಿದ್ದಾರೆ.
ಪಿಡಬ್ಲ್ಯೂಡಿ ಕ್ಲಾಸ್-1 ಗುತ್ತಿಗೆದಾರರೊಬ್ಬರು 2022-23ನೇ ಸಾಲಿನ ಐದನೇ ಹಣಕಾಸು ಯೋಜನೆಯಲ್ಲಿ ಕಿನ್ನಿಗೋಳಿ ಪಟ್ಟಣ ಪಂಚಾಯತ್ ವ್ಯಾಪ್ತಿಯ ಎಸ್.ಕೋಡಿ ಸರ್ಕಾರಿ ಕೆರೆ ಅಭಿವೃದ್ಧಿ ಕಾಮಗಾರಿಗೆ ಗುತ್ತಿಗೆ ಕೆಲಸ ನಿರ್ವಹಿಸಿದ್ದರು. ಕಾಮಗಾರಿಯ 9,77,154 ರೂ ಮೊತ್ತದ ಬಿಲ್ ಮಂಜೂರಾತಿಗೆ ಕಿನ್ನಿಗೊಳಿ ಪಟ್ಟಣ ಪಂಚಾಯತ್ನ ಜೂನಿಯರ್ ಇಂಜಿನಿಯರ್ ನಾಗರಾಜು ಅವರ ಬಳಿ ಪಿಡಬ್ಲ್ಯೂಡಿ ಕ್ಲಾಸ್-1 ಗುತ್ತಿಗೆದಾರರು ತೆರಳಿದ್ದರು. ಈ ವೇಳೆ ಬಿಲ್ ಪಾಸ್ ಮಾಡಲು ತನಗೆ 37 ಸಾವಿರ ರೂ. ಮತ್ತು ಕಿನ್ನಿಗೊಳಿ ಪಟ್ಟಣ ಪಂಚಾಯತ್ನ ಮುಖ್ಯಾಧಿಕಾರಿಗೆ 15 ಸಾವಿರ ರೂ. ಲಂಚ ನೀಡಬೇಕೆಂದು ಬೇಡಿಕೆ ಇಟ್ಟಿದ್ದರು. ಅಲ್ಲದೆ ಜೂನಿಯರ್ ಇಂಜಿನಿಯರ್ ನಾಗರಾಜು ಮುಂಚಿತವಾಗಿ 7000 ರೂ. ಲಂಚ ಪಡೆದಿದ್ದರು.
ಉಳಿದ ಲಂಚದ ಮೊತ್ತವಾಗಿ ಕಿನ್ನಿಗೋಳಿ ಪಟ್ಟಣ ಪಂಚಾಯತ್ನ ಜೂನಿಯರ್ ಇಂಜಿನಿಯರ್ ನಾಗರಾಜು 30 ಸಾವಿರ ರೂ. ಮತ್ತು ಕಿನ್ನಿಗೋಳಿ ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ 15 ಸಾವಿರ ರೂ. ಸ್ವೀಕರಿಸುತ್ತಿರುವಾಗ ಲೋಕಾಯುಕ್ತ ಅಧಿಕಾರಿಗಳು ಬಲೆ ಬೀಸಿದ್ದಾರೆ.
ಕಿನ್ನಿಗೋಳಿ ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ಮತ್ತು ಜೂನಿಯರ್ ಇಂಜಿನಿಯರ್ 52 ಸಾವಿರ ರೂ ಬೇಡಿಕೆ ಇಟ್ಟು, ಇಂದು 45 ಸಾವಿರ ರೂ ಸ್ವೀಕರಿಸುತ್ತಿದ್ದರು. ಈ ಹಿಂದೆಯೂ ಜೂನಿಯರ್ ಇಂಜಿನಿಯರ್ 7 ಸಾವಿರ ರೂಪಾಯಿಯನ್ನು ಗೂಗಲ್ ಪೇ ಮೂಲಕ ಪಡೆದಿದ್ದರು. ಈ ಸಂಬಂಧ ಇಬ್ಬರನ್ನು ಬಂಧಿಸಿದ್ದಾಗಿ ಕರ್ನಾಟಕ ಲೋಕಾಯುಕ್ತ ಮಂಗಳೂರು ಪೊಲೀಸ್ ಅಧೀಕ್ಷಕ ಎಂ.ಎ.ನಟರಾಜ್ ಮಾಹಿತಿ ನೀಡಿದ್ದಾರೆ.
ಕರ್ನಾಟಕ ಲೋಕಾಯುಕ್ತ ಮಂಗಳೂರು ಪೊಲೀಸ್ ಅಧೀಕ್ಷಕ ಎಂ.ಎ.ನಟರಾಜ್ ಮಾರ್ಗದರ್ಶನದಲ್ಲಿ ಮಂಗಳೂರು ಲೋಕಾಯುಕ್ತ ಠಾಣಾ ಉಪಾಧೀಕ್ಷಕಿ ಡಾ.ಗಾನ ಪಿ.ಕುಮಾರ್, ಪೊಲೀಸ್ ನಿರೀಕ್ಷಕರಾದ ಅಮಾನುಲ್ಲಾ ಎ, ಸುರೇಶ್ ಕುಮಾರ್ ಪಿ, ಚಂದ್ರಶೇಖರ್ ಕೆ.ಎನ್, ಚಂದ್ರಶೇಖರ್ ಸಿ.ಎಲ್ ಅವರು ಸಿಬ್ಬಂದಿಯೊಂದಿಗೆ ಕಾರ್ಯಾಚರಣೆ ನಡೆಸಿದ್ದಾರೆ.