ಬೆಂಗಳೂರು: ಮನೆಯ ಆವರಣದಲ್ಲಿದ್ದ ವಿದ್ಯುತ್ ಕಂಬ ಸ್ಥಳಾಂತರಿಸುವ ಕಾಮಗಾರಿಯ ಕಾರ್ಯಾದೇಶ ನೀಡಲು 20,000 ಲಂಚ ಪಡೆಯುತ್ತಿದ್ದ ಬೆಸ್ಕಾಂ ಕಸ್ತೂರಿನಗರ ಕಾರ್ಯಾಚರಣೆ ಮತ್ತು ನಿರ್ವಹಣೆ ಉಪ ವಿಭಾಗದ ಸಹಾಯಕ ಎಂಜಿನಿಯರ್ ವಿದ್ಯಾ ಅವರನ್ನು ಲೋಕಾಯುಕ್ತ ಪೊಲೀಸರು ಬುಧವಾರ ಬಂಧಿಸಿದ್ದಾರೆ.
ಬೆಸ್ಕಾಂ ಕಸ್ತೂರಿನಗರ ಕಚೇರಿ ವ್ಯಾಪ್ತಿಯಲ್ಲಿ ಮನೆಯೊಂದರ ಆವರಣದಲ್ಲಿದ್ದ ವಿದ್ಯುತ್ ಕಂಬ ಸ್ಥಳಾಂತರ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ನಾರಾಯಣಪುರ ನಿವಾಸಿ ಅರವಿಂದ್ ಎಂಬ ಎಲೆಕ್ಟ್ರಿಕಲ್ ಗುತ್ತಿಗೆದಾರರಿಗೆ ಕಾರ್ಯಾದೇಶ ನೀಡಬೇಕಿತ್ತು. ಅವರು ಕಚೇರಿಯನ್ನು ಸಂಪರ್ಕಿಸಿದ್ದಾಗ ಕಾರ್ಯಾದೇಶ ನೀಡಲು 25,000 ಲಂಚ ಕೊಡುವಂತೆ ಬೇಡಿಕೆ ಇಟ್ಟಿದ್ದರು. ಮುಂಗಡವಾಗಿ 5,000 ಪಡೆದುಕೊಂಡಿದ್ದರು.
ಬೆಸ್ಕಾಂ ಸಹಾಯಕ ಎಂಜಿನಿಯರ್ ಲಂಚಕ್ಕೆ ಬೇಡಿಕೆ ಇಟ್ಟಿರುವ ಕುರಿತು ಲೋಕಾಯುಕ್ತದ ಬೆಂಗಳೂರು ನಗರ ಪೊಲೀಸ್ ಘಟಕಕ್ಕೆ ದೂರು ನೀಡಿದ್ದರು. ಬುಧವಾರ ಕಸ್ತೂರಿನಗರದ ಬೆಸ್ಕಾಂ ಕಚೇರಿಯಲ್ಲೇ 20,000 ಲಂಚ ಪಡೆಯುತ್ತಿದ್ದಾಗ ದಾಳಿಮಾಡಿದ ಲೋಕಾಯುಕ್ತ ಡಿವೈಎಸ್ಪಿ ಉಮಾದೇವಿ ಆರ್. ಮತ್ತು ತಂಡ ಆರೋಪಿ ವಿದ್ಯಾ ಅವರನ್ನು ಬಂಧಿಸಿದೆ.
ಲೋಕಾಯುಕ್ತದ ಬೆಂಗಳೂರು ನಗರ ಘಟಕದ ಎಸ್ ಪಿ ಕೆ.ವಿ. ಅಶೋಕ್ ನೇತೃತ್ವದಲ್ಲಿ ಈ ಕಾರ್ಯಾಚರಣೆ ನಡೆದಿದೆ.