ಮನೆ ಅಪರಾಧ ನ್ಯಾಕ್‌ ಎ++ ಗ್ರೇಡ್‌ ಪಡೆಯಲು ನ್ಯಾಕ್‌ ಪರಿಶೀಲನಾ ಸಮಿತಿಯ ಸದಸ್ಯರಿಗೆ ಲಂಚ: 10 ಮಂದಿ ಬಂಧನ

ನ್ಯಾಕ್‌ ಎ++ ಗ್ರೇಡ್‌ ಪಡೆಯಲು ನ್ಯಾಕ್‌ ಪರಿಶೀಲನಾ ಸಮಿತಿಯ ಸದಸ್ಯರಿಗೆ ಲಂಚ: 10 ಮಂದಿ ಬಂಧನ

0

ನವದೆಹಲಿ: ರಾಷ್ಟ್ರೀಯ ಮೌಲ್ಯಮಾಪನ ಮತ್ತು ಮಾನ್ಯತಾ ಮಂಡಳಿ (ನ್ಯಾಕ್) ಪರಿಶೀಲನಾ ಸಮಿತಿಯ ಅಧ್ಯಕ್ಷ, ಆರು ಸದಸ್ಯರು ಸೇರಿದಂತೆ 10 ಮಂದಿಯನ್ನು ಸಿಬಿಐ ಅಧಿಕಾರಿಗಳ ತಂಡವು ಭ್ರಷ್ಟಾಚಾರ ಪ್ರಕರಣದಲ್ಲಿ ಶನಿವಾರ ಬಂಧಿಸಿದೆ.

Join Our Whatsapp Group

ದಾವಣಗೆರೆ ವಿಶ್ವವಿದ್ಯಾಲಯದ ಪ್ರಾಧ್ಯಾಪಕರಾದ ಗಾಯತ್ರಿ ದೇವರಾಜ, ನವದೆಹಲಿಯ ಜವಾಹರಲಾಲ್‌ ನೆಹರೂ ವಿ.ವಿ (ಜೆಎನ್‌ಯು) ಪ್ರಾಧ್ಯಾಪಕ, ಆಂಧ್ರಪ್ರದೇಶದ ಗುಂಟೂರಿನಲ್ಲಿರುವ ಕೋನೇರು ಲಕ್ಷ್ಮಯ್ಯ ಎಜುಕೇಷನ್‌ ಫೌಂಡೇಷನ್‌ನ (ಕೆಎಲ್‌ಇಎಫ್) ಕುಲಪತಿ ಬಂಧಿತರಲ್ಲಿ ಸೇರಿದ್ದಾರೆ.

ನ್ಯಾಕ್‌ ಎ++’ ಗ್ರೇಡ್‌ ಪಡೆಯಲು ನ್ಯಾಕ್‌ ಪರಿಶೀಲನಾ ಸಮಿತಿಯ ಸದಸ್ಯರಿಗೆ ಲಂಚ ನೀಡಿದ ಆರೋಪದಲ್ಲಿ ಕೆಎಲ್‌ಇಎಫ್ ಕುಲಪತಿ ಜಿ.ಪಿ.ಸಾರಥಿ ವರ್ಮಾ, ಉಪಾಧ್ಯಕ್ಷ ಕೋನೇರು ರಾಜಾ ಹರೀನ್, ಕೆ.ಎಲ್‌ ವಿಶ್ವವಿದ್ಯಾಲಯದ ಹೈದರಾಬಾದ್ ಕ್ಯಾಂಪಸ್‌ನ ನಿರ್ದೇಶಕ ಎ.ರಾಮಕೃಷ್ಣ ಅವರನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕೆಎಲ್‌ಇಎಫ್‌ ಸಂಸ್ಥೆಯ ಪದಾಧಿಕಾರಿಗಳು ನ್ಯಾಕ್‌ ಪರಿಶೀಲನಾ ತಂಡಕ್ಕೆ ನಗದು, ಚಿನ್ನಾಭರಣ, ಮೊಬೈಲ್‌ ಫೋನ್‌ ಮತ್ತು ಲ್ಯಾಪ್‌ಟಾಪ್‌ ನೀಡಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು. ಇದಕ್ಕೆ ಸಂಬಂಧಿಸಿದಂತೆ ಸಿಬಿಐ ಪ್ರಕರಣ ದಾಖಲಿಸಿಕೊಂಡು, ಶೋಧ ಕಾರ್ಯ ನಡೆಸಿದೆ.

ಲಂಚ ಪಡೆದ ಆರೋಪದಲ್ಲಿ ನ್ಯಾಕ್ ಪರಿಶೀಲನಾ ಸಮಿತಿಯ ಅಧ್ಯಕ್ಷ, ಜಾರ್ಖಂಡ್‌ನ ರಾಮಚಂದ್ರ ಚಂದ್ರವಂಶಿ ವಿಶ್ವವಿದ್ಯಾಲಯದ ಕುಲಪತಿ ಸಮರೇಂದ್ರ ನಾಥ್‌ ಸಹಾ ಅವರನ್ನು ಬಂಧಿಸಲಾಗಿದೆ.

ರಾಜೀವ್ ಸಿಜಾರಿಯಾ (ಜೆಎನ್‌ಯು ಪ್ರಾಧ್ಯಾಪಕ), ಡಿ.ಗೋಪಾಲ್ (ಡೀನ್, ಭಾರತ್‌ ಇನ್‌ಸ್ಟಿಟ್ಯೂಟ್‌ ಆಫ್‌ ಲಾ), ರಾಜೇಶ್‌ ಸಿಂಗ್‌ ಪವಾರ್ (ಡೀನ್, ಜಾಗರಣ್‌ ಲೇಕ್‌ಸಿಟಿ ವಿ.ವಿ), ಮಾನಸ್‌ ಕುಮಾರ್‌ ಮಿಶ್ರಾ (ನಿರ್ದೇಶಕರು, ಜಿ.ಎಲ್‌.ಬಜಾಜ್‌ ಇನ್‌ಸ್ಟಿಟ್ಯೂಟ್‌ ಆಫ್‌ ಟೆಕ್ನಾಲಜಿ ಅಂಡ್‌ ಮ್ಯಾನೇಜ್‌ಮೆಂಟ್), ಗಾಯತ್ರಿ ದೇವರಾಜ (ಪ್ರಾಧ್ಯಾಪಕರು, ದಾವಣಗೆರೆ ವಿ.ವಿ) ಮತ್ತು ಬುಲು ಮಹಾರಾಣಾ (ಪ್ರಾಧ್ಯಾಪಕರು, ಸಂಬಲ್‌ಪುರ ವಿ.ವಿ) ಅವರು ಸಿಬಿಐ ಬಂಧಿಸಿರುವ ನ್ಯಾಕ್‌ ಪರಿಶೀಲನಾ ಸಮಿತಿ ಸದಸ್ಯರು.

20 ಸ್ಥಳಗಳಲ್ಲಿ ಶೋಧ

ಭ್ರಷ್ಟಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ಅಧಿಕಾರಿಗಳ ತಂಡವು ದೇಶದ 20 ಸ್ಥಳಗಳಲ್ಲಿ ಶೋಧ ಕಾರ್ಯ ನಡೆಸಿದೆ. ಚೆನ್ನೈ, ಬೆಂಗಳೂರು, ವಿಜಯವಾಡ, ಪಲಾಮು, ಸಂಬಲ್‌ಪುರ, ಭೋಪಾಲ್, ಬಿಲಾಸಪುರ, ಗೌತಮ ಬುದ್ಧ ನಗರ ಮತ್ತು ನವದೆಹಲಿಯಲ್ಲಿ ಆರೋಪಿಗಳಿಗೆ ಸೇರಿದ ಸ್ಥಳಗಳಲ್ಲಿ ಶೋಧ ನಡೆದಿದೆ ಎಂದು ಸಿಬಿಐ ವಕ್ತಾರರು ತಿಳಿಸಿದ್ದಾರೆ.

₹37 ಲಕ್ಷ ನಗದು, ಆರು ಲ್ಯಾಪ್‌ಟಾಪ್‌ಗಳು, ಒಂದು ಐಫೋನ್ ಮತ್ತು ಇತರ ಕೆಲವು ವಸ್ತುಗಳನ್ನು ಜಪ್ತಿ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.

ಇತರ ಆರೋಪಿಗಳು

ಕೆಎಲ್ಇಎಫ್ ಅಧ್ಯಕ್ಷ ಕೋನೇರು ಸತ್ಯನಾರಾಯಣ, ನ್ಯಾಕ್ ಮಾಜಿ ಉಪ ಸಲಹೆಗಾರ ಎಲ್‌.ಮಂಜುನಾಥ ರಾವ್, ಬೆಂಗಳೂರು ವಿ.ವಿ ಪ್ರಾಧ್ಯಾಪಕ ಐಕ್ಯುಎಸಿ–ನ್ಯಾಕ್ ನಿರ್ದೇಶಕ ಎಂ.ಹನುಮಂತಪ್ಪ ಮತ್ತು ನ್ಯಾಕ್‌ ಸಲಹೆಗಾರ ಎಂ.ಎಸ್‌.ಶ್ಯಾಮಸುಂದರ್ ಅವರ ಹೆಸರು ಎಫ್‌ಐಆರ್‌ನಲ್ಲಿ ಇದೆ. ಆದರೆ ಅವರನ್ನು ಇನ್ನೂ ಬಂಧಿಸಿಲ್ಲ ಎಂದು ಸಿಬಿಐ ಹೇಳಿದೆ.