ಅಹಮದಾಬಾದ್: ಏರ್ ಇಂಡಿಯಾ ವಿಮಾನ ದುರಂತದಲ್ಲಿ ಮೃತರ ಸಂಖ್ಯೆ ಭಾರೀ ಪ್ರಮಾಣದಲ್ಲಿ ವರದಿಯಾಗುತ್ತಿದ್ದರೆ, ಮತ್ತೊಂದು ಕಡೆ 40 ವರ್ಷದ ಬ್ರಿಟಿಷ್ ಪ್ರಜೆ ರಮೇಶ್ ವಿಶ್ವಾಸ್ ಕುಮಾರ್ ಪವಾಡದಂತೆ ಬದುಕುಳಿದಿದ್ದಾರೆ. ತಮ್ಮ ಪಾರಾಗುವ ಕ್ಷಣಗಳನ್ನು ಅವರು ಮಾಧ್ಯಮಗಳ ಮುಂದೆ ಬಿಚ್ಚಿಟ್ಟಿದ್ದಾರೆ.
ಅಹಮದಾಬಾದ್‌ನ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ರಮೇಶ್, “ಕೆಲ ಕ್ಷಣ ನಾನು ಸತ್ತೇ ಹೋಗಿದ್ದೇನೆ ಅನ್ನಿಸಿತ್ತು. ಕಣ್ಣು ತೆರೆಯುವಷ್ಟರಲ್ಲಿ ನಾನು ಬದುಕಿದ್ದೇನೆ ಅನ್ನಿಸುವುದು ನಂಬಲಾಗದ ಅನುಭವವಿತ್ತು” ಎಂದು ದುರಂತದ ಭಯಾನಕ ಅನುಭವವನ್ನು ಹಂಚಿಕೊಂಡರು.
ರಮೇಶ್ ಹೇಳುವ ಪ್ರಕಾರ, ವಿಮಾನ ಟೇಕಾಫ್ ಆಗ್ತಿದ್ದಂತೆ ಏನೋ ಸಮಸ್ಯೆ ಆಗಿದೆ ಎಂದು ಗೊತ್ತಾಯ್ತು. 5 ರಿಂದ 10 ಸೆಕೆಂಡ್ ವಿಮಾನ ಸ್ಟ್ರಕ್ ಆದಂತೆ ಅನ್ನಿಸಿತು. ವಿಮಾನದ ಒಳಗೆ ಹಸಿರು, ಬಿಳಿ ಬಣ್ಣದ ಲೈಟ್ ಆನ್ ಆಯ್ತು. ಕೆಲವೇ ಸೆಕೆಂಡ್‌ನಲ್ಲಿ ವಿಮಾನ ಕಟ್ಟಡಕ್ಕೆ ಡಿಕ್ಕಿಯಾಯ್ತು. ಬಳಿಕ ವಿಮಾನ ಕಟ್ಟಡದ ಮೇಲಿಂದ ಕೆಳಗೆ ಇಳಿದಿತ್ತು. ನಾನು ಸೀಟ್ ಬೆಲ್ಟ್ ತೆಗೆದು, ಎಮರ್ಜೆನ್ಸಿ ಬಾಗಿಲಿನ ಮೂಲಕ ನೆಲದ ಮೇಲೆ ಜಂಪ್ ಮಾಡಿದೆ ಎಂದು ವಿವರಿಸಿದ್ದಾರೆ. ಆದರೆ ಕಟ್ಟಡದ ಗೋಡೆ ಮುಚ್ಚಿದ ಕಾರಣ ಬೇರೆ ಯಾರಿಗೂ ಅವಕಾಶ ದೊರಕಲಿಲ್ಲ. ಆದರೆ ನಾನು ಹೇಗೆ ಬದುಕಿ ಬಂದೆ ಎಂಬುದೇ ನನಗೇ ಆಶ್ಚರ್ಯ ಎಂದು ಆ ಕ್ಷಣದ ಕುರಿತು ಹೇಳಿದರು.
ಘಟನೆಯ ನಂತರ ಅಲ್ಲಿ ಬೆಂಕಿ ಹೊತ್ತಿಕೊಂಡಾಗ ನನ್ನ ಎಡಗೈ ಕೂಡ ಸುಡಲು ಆರಂಭಿಸಿತು. ಆಗ ನಾನು ಅಲ್ಲಿಂದ ಓಡಿ ಬಂದೆ. ಆಗ ಯಾರೋ ನನ್ನನ್ನು ಎಳೆದು ಅಂಬುಲೆನ್ಸ್‌ನಲ್ಲಿ ಕೂರಿಸಿದರು ಎಂದು ವಿವರಿಸಿದರು.
“ಇದೊಂದು ಪುನರ್ಜನ್ಮ. ಈಗ ಆಸ್ಪತ್ರೆಯಲ್ಲಿ ಉತ್ತಮ ಚಿಕಿತ್ಸೆ ದೊರೆಯುತ್ತಿದೆ” ಎಂದು ಹೇಳಿದ ರಮೇಶ್, ಪ್ರಧಾನಿ ನರೇಂದ್ರ ಮೋದಿಯವರೂ ನನ್ನನ್ನು ಸಂಪರ್ಕಿಸಿ ಘಟನೆಯ ಕುರಿತು ವಿವರ ಕೇಳಿದರು ಎಂದರು.














