ಮನೆ ಅಪರಾಧ ಮಳೆ ನೀರು ಕಾರಿಗೆ ಹಾರಿಸಿದ್ದಕ್ಕೆ ಕ್ರೂರ ಹಲ್ಲೆ : ಬೆರಳು ಕಚ್ಚಿ ವಿಕೃತಿ ಮೆರೆದ ಮಾಲೀಕ!

ಮಳೆ ನೀರು ಕಾರಿಗೆ ಹಾರಿಸಿದ್ದಕ್ಕೆ ಕ್ರೂರ ಹಲ್ಲೆ : ಬೆರಳು ಕಚ್ಚಿ ವಿಕೃತಿ ಮೆರೆದ ಮಾಲೀಕ!

0

ಬೆಂಗಳೂರು: ನಗರದ ಓಕಳಿಪುರಂ ಅಂಡರ್‌ಪಾಸ್‌ನಲ್ಲಿ ಒಂದಿಷ್ಟು ನೀರು ಕಾರಿಗೆ ಹಾರಿದ್ದಕ್ಕೆ ವ್ಯಕ್ತಿಯೊಬ್ಬನ ಕೈ ಬೆರಳು ಕಚ್ಚಿ ಗಂಭೀರವಾಗಿ ಗಾಯಗೊಳಿಸಿದ ಘಟನೆ ಬೆಳಕಿಗೆ ಬಂದಿದೆ. ಈ ಘಟನೆ ಮೇ 25ರಂದು ಸಂಭವಿಸಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಆರೋಪಿಯ ವಿರುದ್ಧ ಮಾಗಡಿ ರಸ್ತೆ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ.

ಗಾಯಗೊಂಡ ವ್ಯಕ್ತಿಯನ್ನು ಜಯಂತ್ ಎಂದು ಗುರುತಿಸಲಾಗಿದ್ದು, ಅವರು ತಮ್ಮ ಪತ್ನಿಯೊಂದಿಗೆ ಮೆಜೆಸ್ಟಿಕ್‌ನಿಂದ ಲುಲು ಮಾಲ್ ಕಡೆ ತೆರಳುತ್ತಿದ್ದರು. ಈ ವೇಳೆ ಓಕಳಿಪುರಂ ಅಂಡರ್‌ಪಾಸ್‌ನಲ್ಲಿ ನಿಂತಿದ್ದ ಮಳೆ ನೀರಿನಲ್ಲಿ ಕಾರು ಚಲಿಸಿದಾಗ ಪಕ್ಕದಲ್ಲಿದ್ದ ಇನ್ನೊಂದು ಕಾರಿಗೆ ನೀರು ಹಾರಿದೆ. ಈ ಸಣ್ಣ ವಿಷಯವನ್ನು ದ್ವೇಷಪೂರ್ವಕವಾಗಿ ತೆಗೆದುಕೊಂಡ ಕಾರು ಮಾಲೀಕ ತನ್ನ ವಾಹನವನ್ನು ಜಯಂತ್ ಕಾರಿಗೆ ಅಡ್ಡಗಟ್ಟಿ, ತೀವ್ರವಾಗಿ ಅವಾಚ್ಯ ಪದಗಳಿಂದ ನಿಂದನೆ ಮಾಡಿದ್ದಾರೆ.

ಜಯಂತ್ ಕ್ಷಮೆ ಯಾಚಿಸಿದ್ರೂ ಆಕ್ರೋಶದಿಂದ ಮಾಲೀಕ ಮೆಜೆಸ್ಟಿಕ್ ಅಂಡರ್‌ಪಾಸ್‌ನಿಂದ ಲುಲು ಮಾಲ್ ಅಂಡರ್‌ಪಾಸ್‌ವರೆಗೂ ಹಿಂಬಾಲಿಸಿಕೊಂಡು, ಜಯಂತ್ ಕಾರನ್ನು ಮತ್ತೆ ಅಡ್ಡಗಟ್ಟಿ ಕ್ರೂರವಾಗಿ ಹಲ್ಲೆ ಮಾಡಿದ್ದಾರೆ.

ಅಪರಿಚಿತ ವ್ಯಕ್ತಿ ಕಾರಿನಿಂದ ಕೆಳಗಿಳಿದು ಜಯಂತ್‌ರನ್ನು ಕಾರಿನಿಂದ ಎಳೆಗಿಳಿಸಿ ಮುಖಕ್ಕೆ ಒದ್ದಿದ್ದಾರೆ. ಅಲ್ಲದೆ, ಬಲಗೈ ಬೆರಳಿಗೆ ಬಲವಾಗಿ ಕಚ್ಚಿ ಗಾಯಗೊಳಿಸಿದ್ದಾರೆ. ವೈದ್ಯಕೀಯ ವರದಿಯ ಪ್ರಕಾರ, ಜಯಂತ್ ಬೆರಳಿಗೆ ಐದು ಸ್ಟಿಚ್ ಹಾಕಲಾಗಿದ್ದು, ಆರು ತಿಂಗಳ ವಿಶ್ರಾಂತಿ ಅಗತ್ಯವಿದೆ ಎಂಬ ಸಲಹೆ ದೊರಕಿದೆ.

ಈ ಹಲ್ಲೆಯ ಪರಿಣಾಮವಾಗಿ ಜಯಂತ್‌ಗೆ ಸುಮಾರು 2 ಲಕ್ಷ ರೂಪಾಯಿಗಳ ಚಿಕಿತ್ಸೆ ವೆಚ್ಚವಾಗಿದೆ. ದೈನಂದಿನ ಕಾರ್ಯ ನಿರ್ವಹಣೆಯಲ್ಲಿ ತೊಂದರೆ ಉಂಟಾಗಿರುವ ಜಯಂತ್ ಕುಟುಂಬ ಆರ್ಥಿಕ ಹಿನ್ನಡೆಗೂ ಒಳಗಾಗಿದೆ.

ಘಟನೆ ಸಂಬಂಧ ಮಾಗಡಿ ರಸ್ತೆ ಪೊಲೀಸ್ ಠಾಣೆಯಲ್ಲಿ KA02 MT0512 ಕಾರು ಮಾಲೀಕನ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದ್ದು, ತನಿಖೆ ಮುಂದುವರೆದಿದೆ.