ಚಂಡೀಗಢ: ಭಾರತ ಗಡಿ ಪ್ರವೇಶಿಸುತ್ತಿದ್ದ ಡ್ರೋನ್’ನ್ನು ಪಂಜಾಬ್’ನ ಭಾರತ–ಪಾಕಿಸ್ತಾನ ಅಂತರರಾಷ್ಟ್ರೀಯ ಗಡಿಯಲ್ಲಿ ಭದ್ರತಾ ಪಡೆ (ಬಿಎಸ್’ಎಫ್) ಸಿಬ್ಬಂದಿ ಹೊಡೆದುರುಳಿಸಿದ್ದಾರೆ.
ಶುಕ್ರವಾರ ಬೆಳಗ್ಗೆ 7.45ರ ಸುಮಾರಿಗೆ ಅಮೃತಸರ ಪುಲ್ಮೋರನ್ ಪೋಸ್ಟ್ ಸೆಕ್ಟರ್’ನ 22ರಲ್ಲಿ ಪ್ರವೇಶಿಸುತ್ತಿದ್ದ ಡ್ರೋನ್’ವೊಂದನ್ನು ಬಿಎಸ್’ಎಫ್ ಸಿಬ್ಬಂದಿ ಹೊಡೆದುರುಳಿಸಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದರು.
ಮಾದಕವಸ್ತು ಕಳ್ಳಸಾಗಣೆ ಉದ್ದೇಶದಿಂದ ಭಾರತದ ಗಡಿ ಪ್ರವೇಶಿಸಿದ್ದ ಡ್ರೋನ್ ಒಂದನ್ನು ಗಡಿ ಬಳಿ ಬುಧವಾರ ಬಿಎಸ್’ಎಫ್ ಸಿಬ್ಬಂದಿ ಹೊಡೆದುರುಳಿಸಿದ್ದರು.
ಅಮೃತಸರದ ದಾವೊಕೆ ಸೇನಾ ನೆಲೆ ಬಳಿ ಡ್ರೋನ್ ಹೊಡೆದುರುಳಿಸಲಾಯಿತು. ಅದು ಪಾಕಿಸ್ತಾನದ ಗಡಿ ಒಳಗೆ ಬಿದ್ದಿತು. ಪಾಕಿಸ್ತಾನಿ ಸೈನಿಕರು ಅದನ್ನು ತೆಗೆದುಕೊಂಡು ಹೋದರು. ಡ್ರೋನ್ ಹಾರಾಡಿದ ಪ್ರದೇಶದಲ್ಲಿ ಪರಿಶೀಲಿಸಿದಾಗ ಭಾರೊಪಾಲ್ ಗ್ರಾಮದ ಗಡಿಯಲ್ಲಿ 4.3 ಕೆ.ಜಿ ಹೆರಾಯಿನ್ ಪತ್ತೆಯಾಗಿದೆ. ಡ್ರೋನ್ ಮೂಲಕವೇ ಇದನ್ನು ಭಾರತದ ಗಡಿಯೊಳಗೆ ಎಸೆಯಲಾಗಿದೆ ಎಂಬ ಶಂಕೆ ವ್ಯಕ್ತವಾಗಿದೆ ಎಂದು ವಕ್ತಾರರು ತಿಳಿಸಿದ್ದರು.
ಭಾರತ–ಪಾಕಿಸ್ತಾನ ಅಂತರ ರಾಷ್ಟ್ರೀಯ ಗಡಿಯ ಗಟ್ಟಿ ಅಜೈಬ್ ಸಿಂಗ್ ಗ್ರಾಮದ ಕೃಷಿ ಭೂಮಿಯಲ್ಲಿ 25 ಕಿಲೋಗ್ರಾಂ ಶಂಕಿತ ಹೆರಾಯಿನ್’ನನ್ನು ಬಿಎಸ್’ಎಫ್ ಸಿಬ್ಬಂದಿ ವಶಕ್ಕೆ ತೆಗೆದುಕೊಂಡಿದ್ದರು.
ಗಡಿ ನಿಗದಿಪಡಿಸುವ ಬೇಲಿ ಬಳಿ ಶಂಕಾಸ್ಪದ ಚಟುವಟಿಕೆಗಳು ಕಂಡುಬಂದ ಹಿನ್ನೆಲೆಯಲ್ಲಿ ಬಿಎಸ್ಎಫ್ ಸಿಬ್ಬಂದಿ ಪಾಕಿಸ್ತಾನ ಕಳ್ಳಸಾಗಣೆದಾರರ ಮೇಲೆ ಗುಂಡು ಹಾರಿಸಿದರು. ಆದರೆ ಅವರು ತಪ್ಪಿಸಿಕೊಂಡರು. ಸ್ಥಳದಲ್ಲಿ 25 ಪೊಟ್ಟಣ ಹೆರಾಯಿನ್ ಎನ್ನಲಾದ ವಸ್ತು ಸಿಕ್ಕಿದೆ ಎಂದು ಎಂದು ವಕ್ತಾರರು ತಿಳಿಸಿದ್ದರು.