ಗಾಜಿಯಾಬಾದ್(ಉತ್ತರ ಪ್ರದೇಶ): 2024ರ ಲೋಕಸಭೆ ಚುನಾವಣೆಗೆ ದಿಕ್ಸೂಚಿಯಾಗಿರುವ ಪಂಚರಾಜ್ಯಗಳ ಚುನಾವಣಾ ಫಲಿತಾಂಶ ಬಹಿರಂಗಗೊಳ್ಳುತ್ತಿದ್ದು, ಉತ್ತರ ಪ್ರದೇಶದಲ್ಲಿ ಮತ್ತೊಂದು ಅವಧಿಗೆ ಬಿಜೆಪಿ ಅಧಿಕಾರದ ಚುಕ್ಕಾಣಿ ಹಿಡಿಯುವುದು ಖಚಿತಗೊಂಡಿದೆ.
ಇದರ ಮಧ್ಯೆ ಗಾಜಿಯಾಬಾದ್ ನಗರ ವಿಧಾನಸಭೆ ಕ್ಷೇತ್ರದ ಮತ ಎಣಿಕೆ ಕೇಂದ್ರದಲ್ಲಿ ಫಲಿತಾಂಶ ಕೇಳಿ ಬಿಎಸ್‍ಪಿ ಕಾರ್ಯಕರ್ತನಿಗೆ ಹೃದಯಾಘಾತವಾಗಿದೆ. ಮತ ಎಣಿಕೆ ವೇಳೆ ಬಹುಜನ ಸಮಾಜವಾದಿ ಪಕ್ಷದ ಕಾರ್ಯಕರ್ತನಿಗೆ ಹೃದಯಾಘಾತವಾಗಿದ್ದು, ತಕ್ಷಣವೇ ಆತನನ್ನ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಗಾಜಿಯಾಬಾದ್ ನಗರ ವಿಧಾನಸಭೆ ಕ್ಷೇತ್ರದಲ್ಲಿ ಬಿಎಸ್‍ಪಿ ಅಭ್ಯರ್ಥಿಯಾಗಿ ಕೆಕೆ ಶುಕ್ಲಾ ಕಣಕ್ಕಿಳಿದಿದ್ದು, ಅವರ ಪರವಾಗಿ ಮತಕೇಂದ್ರಕ್ಕೆ ಅಂಕಿತ್ ಯಾದವ್ ಆಗಮಿಸಿದ್ದರು. ಫಲಿತಾಂಶ ಕೇಳುತ್ತಿದ್ದಂತೆ ಅವರಿಗೆ ಹೃದಯಾಘಾತವಾಗಿದ್ದು, ಪ್ರಜ್ಞಾಹೀನ ಸ್ಥಿತಿಗೆ ತಲುಪಿದ್ದಾರೆ. ಇದರ ಬೆನ್ನಲ್ಲೇ ಇತರ ಕಾರ್ಯಕರ್ತರು ಅವರನ್ನ ಆಸ್ಪತ್ರೆಗೆ ದಾಖಲಿಸಲಾಗಿದೆ.403 ಕ್ಷೇತ್ರಗಳ ಉತ್ತರ ಪ್ರದೇಶದಲ್ಲಿ ಬಿಜೆಪಿ 264 ಸ್ಥಾನಗಳಲ್ಲಿ ಮುನ್ನಡೆಯಲಿದ್ದು, ಸಮಾಜವಾದಿ ಪಕ್ಷ 128 ಹಾಗೂ ಬಿಎಸ್‍ಪಿ ಕೇವಲ 4 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ.