ಬೆಂಗಳೂರು (Bengaluru)- ನನಗೆ ಎಂಎಲ್ ಸಿ ಟಿಕೆಟ್ ಕೈ ತಪ್ಪಿದ್ದರಿಂದ ಬಿ.ಎಸ್. ಯಡಿಯೂರಪ್ಪ ಅವರಿಗೆ ಹಿನ್ನೆಡೆ ಆಗಲ್ಲ ಎಂದು ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಎಸ್ ಯಡಿಯೂರಪ್ಪ 40 ವರ್ಷದಿಂದ ಪಕ್ಷ ಸಂಘಟನೆ ಮಾಡುತ್ತಿದ್ದಾರೆ. ಬಿಎಸ್ ವೈ ಶಕ್ತಿ ಇಡೀ ರಾಜ್ಯಕ್ಕೆ ಗೊತ್ತಿದೆ. ಎಂಎಲ್‌ಸಿ ಟಿಕೆಟ್ ಕೈ ತಪ್ಪಿದ್ದರಿಂದ ಅವರಿಗೆ ಹಿನ್ನೆಡೆ ಆಗಲ್ಲ. ನನ್ನ ಮಗನನ್ನು ಎಂಎಲ್‌ಸಿ ಮಾಡಿ ಎಂದು ಅವರು ಯಾರ ಹತ್ತಿರಾನೂ ವಕಾಲತ್ತು ಮಾಡಿಲ್ಲ. ವಿಜಯೇಂದ್ರ ಏನಾಗಬೇಕೆಂದು ಎಂಬುದನ್ನ ಪಕ್ಷ ಮುಂದೆ ತೀರ್ಮಾನ ಮಾಡುತ್ತೆ ಎಂದರು.
ಬಿ.ಎಲ್.ಸಂತೋಷ್ ರಿಂದ ಟಿಕೆಟ್ ಕೈತಪ್ಪಿದೆ ಎಂಬ ಆರೋಪ ಕುರಿತು ಪ್ರತಿಕ್ರಿಯಿಸಿದ ಬಿವೈ ವಿಜಯೇಂದ್ರ, ಆ ರೀತಿಯ ಯಾವುದೇ ಬೆಳವಣಿಗೆ ನಡೆದಿಲ್ಲ. ಅಭ್ಯರ್ಥಿ ಆಯ್ಕೆ ಮಾಡೋದು ಕೋರ್ ಕಮಿಟಿ ಹಾಗೂ ಕೇಂದ್ರ ನಾಯಕರು. ಇದರಲ್ಲಿ ಯಾರೋ ಒಬ್ಬರ ಮೇಲೆ ಆರೋಪ ಮಾಡೋದು ಸರಿಯಲ್ಲ ಎಂದರು.
ಚುನವಾಣಾ ಪ್ರಚಾರ ಸಭೆಯಲ್ಲಿ ಬಿಎಸ್ವೈ ಭಾವಚಿತ್ರ ಕೈಬಿಟ್ಟ ವಿಚಾರವಾಗಿ ಮಾತನಾಡಿದ ಅವರು, ಯಾರು ಕೈ ಬಿಟ್ಟಿದ್ದಾರೆ ಆ ಮಹಾನುಭಾವರನ್ನೇ ಕೇಳಬೇಕು. ಬಿಎಸ್ ವೈ ಶಕ್ತಿ ಕುಂದಿಸಲು ಯಾರಿದಂಲೂ ಸಾಧ್ಯವಿಲ್ಲ. ಬಿಎಸ್ ವೈ ಇಲ್ಲದೆ ಬಿಜೆಪಿ ಇಲ್ಲ. ಬಿಜೆಪಿ ಇಲ್ಲದೇ ಬಿಎಸ್ ವೈ ಇಲ್ಲ. ಬಿಎಸ್ ವೈರನ್ನ ಯಾರೂ ಕಡೆಗಣಿಸಿಲ್ಲ ಎಂದು ಹೇಳಿದರು.
ಪಕ್ಷದ ರಾಜಕಾರಣಕ್ಕೆ ಮಾತ್ರ ವಿಜಯೇಂದ್ರ ಸೀಮಿತ ವಿಚಾರ ಕುರಿತು ಪ್ರತಿಕ್ರಿಯಿಸಿದ ಅವರು, ಈ ಪ್ರಶ್ನೆಗೆ ಮುಂದಿನ ದಿನಗಳಲ್ಲಿ ಉತ್ತರ ಸಿಗಲಿದೆ. ಬಿಜೆಪಿಯಲ್ಲಿ ನನ್ನ ಹಾಗೆ ಕೆಲಸ ಮಾಡಿದ ಸಾವಿರಾರು ಕಾರ್ಯಕರ್ತರಿದ್ದಾರೆ. ಸ್ವಂತ ದುಡ್ಡು ಖರ್ಚು ಮಾಡಿ ಪಕ್ಷದ ಕೆಲಸ ಮಾಡುತ್ತಿರುವ ಕಾರ್ಯಕರ್ತರಿದ್ದಾರೆ. ಪರಿಷತ್ ಚುನಾವಣೆಗೆ ಸುಮಾರು 20 ಜನರು ಹೆಸರು ಶಿಫಾರಸ್ಸು ಮಾಡಲಾಗಿತ್ತು. ಆದರೆ ಆಯ್ಕೆ ಆಗಬೇಕಿರೋದು ಕೇವಲ ನಾಲ್ಕು ಜನ. ಅದನ್ನ ಹೈಕಮಾಂಡ್ ಈಗಾಗಲೇ ತೀರ್ಮಾನ ಮಾಡಿದೆ. ರಾಜ್ಯಾದ್ಯಂತ ಯುವ ಕಾರ್ಯಕರ್ತರು ನನ್ನನ್ನ ಪ್ರೀತಿ ಮಾಡ್ತಾರೆ. ನನಗೆ ಟಿಕೆಟ್ ಸಿಗದಿದ್ದಕ್ಕೆ ಕೆಲವರು ಬೇಸರವಾಗಿದ್ದಾರೆ. ನಾನು ಕೂಡಾ ರಾಜಕಾರಣಕ್ಕೆ ಈಗ ಅಂಬೆಗಾಲಿಕ್ಕುತ್ತಿದ್ದೇನೆ. ಮುಂದಿನ ದಿನಗಳಲ್ಲಿ ಪಕ್ಷ ಉತ್ತಮ ಜವಾಬ್ದಾರಿ ನೀಡಲಿದೆ. ಎಂಎಲ್ಸಿ ಟಿಕೆಟ್ ಸಿಗದಿದ್ದಕ್ಕೆ ಇಲ್ಲಿಗೆ ಎಲ್ಲಾ ಮುಗಿದು ಹೋಗಲ್ಲ ಎಂದು ವಿಜಯೇಂದ್ರ ತಿಳಿಸಿದರು.