ಮನೆ ರಾಜ್ಯ ಬೂದನೂರು ಗ್ರಾ.ಪಂ. ಫಲಾನುಭವಿಗಳಿಗೆ ಕಿರುಕುಳ: ಧರಣಿ

ಬೂದನೂರು ಗ್ರಾ.ಪಂ. ಫಲಾನುಭವಿಗಳಿಗೆ ಕಿರುಕುಳ: ಧರಣಿ

0

ಮಂಡ್ಯ:- ಬೂದನೂರು ಗ್ರಾಮ ಪಂಚಾಯಿತಿಯ ನಿವೇಶನ ಮಹಿಳಾ ಫಲಾನುಭವಿಗಳ ವಿರುದ್ಧ ಸುಳ್ಳು ದೂರು ನೀಡಿ ದೌರ್ಜನ್ಯ ನಡೆಸಿ ಬಹಿರಂಗವಾಗಿ ಅಸ್ಪೃಶ್ಯತೆ ಆಚರಣೆ ಮಾಡುತ್ತಿರುವವರನ್ನು ಬಂಧಿಸುವಂತೆ ಆಗ್ರಹಿಸಿ ಸ್ವಂತ ಮನೆ ನಮ್ಮ ಹಕ್ಕು ಹೋರಾಟ ಸಮಿತಿಯ ಮಹಿಳೆಯರು ಮಂಡ್ಯದಲ್ಲಿ ಪ್ರತಿಭಟನೆ ನಡೆಸಿದರು.

ನಗರದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿ ಎದುರು ಪ್ರತಿಭಟನಾ ಧರಣಿ ನಡೆಸಿ ದೌರ್ಜನ್ಯ ಮಾಡುತ್ತಿರುವವರ ವಿರುದ್ಧ ಕಾನೂನು ಕ್ರಮಕ್ಕೆ ಮುಂದಾಗಬೇಕು ಎಂದು ಒತ್ತಾಯಿಸಿ ಮನವಿ ಸಲ್ಲಿಸಿದರು.

ದಲಿತ ಸಮುದಾಯದ ಮಹಿಳೆಯರಿಗೆ ಗ್ರಾಮ ಪಂಚಾಯತಿಯಿಂದ ನೀಡಿರುವ ನಿವೇಶನ ಕುರಿತಂತೆ ಸುಳ್ಳು ದೂರು‌ ನೀಡಿ ದೌರ್ಜನ್ಯ ಹಾಗೂ ಅಸ್ಪೃಶ್ಯತೆ ಅಚರಣೆ ಮಾಡುವ ಮೂಲಕ ಮಾನಸಿಕ ಕಿರುಕುಳ ನೀಡಲಾಗುತ್ತಿದೆ ಎಂದು ಆರೋಪಿಸಿದರು.

ಫಲಾನುಭವಿ ಸಂಗೀತ ಮಾತನಾಡಿ ಬೂದನೂರು ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ವಾಸಿಸುತ್ತಿರುವ ನಿವೇಶನ ರಹಿತರಿಗೆ ಗ್ರಾಮ ಪಂಚಾಯತಿ ವತಿಯಿಂದ ನಿವೇಶನ ಹಂಚಿಕೆ ಮಾಡಲು ಫಲಾನುಭವಿಗಳನ್ನು ಆಯ್ಕೆ ಮಾಡಲಾಗಿದೆ. ಅದಕ್ಕೆ ನಾವು ನಿವೇಶನರಹಿತರಾಗಿರುವ ಕುರಿತು ಅಗತ್ಯ ದಾಖಲೆ ನೀಡಿದ್ದೇವೆ. ಆದರೂ ನಾವು ಪರಿಶಿಷ್ಟ ಸಮುದಾಯದವರು ಎಂಬ ಹಿನ್ನೆಲೆಯಲ್ಲಿ ಹಳೇ ಬೂದನೂರು ಗ್ರಾಮದ ರವಿ ಬಿನ್ ಸಣ್ಣಪ್ಪ ಕೆಲ ಗ್ರಾಮಸ್ಥರನ್ನು ಎತ್ತಿಕಟ್ಟಿ ಗಂಡನ ಬಿಟ್ಟವಳು,ಇವಳಿಗೆ ಆಸ್ತಿ ಇದೆ ಕೊಡಬೇಡಿ ಎಂದು ಪಂಚಾಯತ್ ಇಲಾಖೆಗೆ ಸುಳ್ಳು ದೂರು ನೀಡಿ‌ ಮಾನಸಿಕ ಹಿಂಸೆ ನೀಡುತ್ತಿದ್ದಾನೆ ಎಂದು ಆರೋಪಿಸಿದರು.

ಮಾದೇವಿ ಮಾತನಾಡಿ,ರವಿ ಬಿನ್ ಸಣ್ಣಪ್ಪ ನನಗೂ ಸಹ ಇವಳ ಗಂಡ ಊರು ಬಿಟ್ಟು ಹೋಗಿದ್ದಾನೆ. ಇವಳಿಗೆ ಗ್ರಾಮದಲ್ಲಿ‌ ನಿವೇಶನ ನೀಡಬೇಡಿ ಎಂದು ಸಾರ್ವಜನಿಕವಾಗಿ ಜಾತಿ ಸೂಚಿಸಿ ನಿಂದನೆ ಮಾಡುತ್ತಾನೆ.ಅದೇ ರೀತಿರವಿ ಗ್ರಾಮದಲ್ಲಿ ಅಕ್ರಮವಾಗಿ ಕೋಳಿ ಅಂಗಡಿ ನಡೆಸುತ್ತಾ, ಕಬಾಬ್,ಗೋಬಿ ಮಾರಾಟ ಮಾಡುವುದರ ಜೊತೆಗೆ ಅಕ್ರಮವಾಗಿ ಕಳಪೆ ಮದ್ಯ ಮಾರಾಟ ಮಾಡಿ ಸಾರ್ವಜನಿಕವಾಗಿ ಗ್ರಾಮದಲ್ಲಿ ಅಶಾಂತಿ ಉಂಟು ಮಾಡುತ್ತಿದ್ದಾನೆ ಎಂದು ಆರೋಪಿಸಿದರು.

ಸ್ವಂತಮನೆ ನಮ್ಮಹಕ್ಕು‌ ಹೋರಾಟ ಸಮಿತಿಯಲ್ಲಿ‌ ಹೋರಾಟ ನೇತೃತ್ವದಲ್ಲಿ ಭೂಮಿ,ನಿವೇಶನ ಪಡೆದಿದ್ದೀರಿ,ನೀವು ಹೊಲೆಯರು, ನಮ್ಮ ಊರಿನಲ್ಲಿ ವಾಸ ಮಾಡಬಾರದು ಎಂದು ಹೇಳಿ ಅವಾಚ್ಯ ಮತ್ತು ಅಶ್ಲೀಲವಾಗಿ ನಿಂದನೆ ಮಾಡುತ್ತಿದ್ದು,  ಇದರಿಂದಾಗಿ ಮಾನಸಿಕ ಹಿಂಸೆಗೆ ಒಳಗಾಗುತ್ತಿದ್ದೇವೆ, ಹಾಗೊಮ್ಮೆ ನಾವು ಸಾವನ್ನಪ್ಪಿದರೆ ರವಿ ಬಿನ್ ಸಣ್ಣಪ್ಪ ಹಾಗೂ ಆತನ ಸಹಚರರು ಎನ್ನಲಾದ ಯಜಮಾನರು ಮತ್ತು ನಮ್ಮ ವಿರುದ್ದ ದೂರು ನೀಡಿರುವ ವ್ಯಕ್ತಿಗಳೇ ಕಾರಣ ಎಂದು ಅಳಲು ತೋಡಿಕೊಂಡರು.

ಈ ಹಿಂದೆ ಗ್ರಾಮದ ಯಜಮಾನ ಬಿ.ಸಿ.ವಾಸುದೇವ್ ಜಾತಿನಿಂದನೆ ಮಾಡಿರುವ ಕುರಿತು ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಾಗಿ ಬಳಿಕ ಗ್ರಾಮಸ್ಥರು ರಾಜಿ ಸಂಧಾನ ಮಾಡಿದ್ದರು.ಇದೀಗ ಇವರು ನಮ್ಮ ಜಾತಿ ಮೇಲು ನೀವು ಕೀಳು ಎಂದು ಸಾರ್ವಜ‌ನಿಕವಾಗಿ ಹೀಯಾಳಿಸಿ ಮಾನಸಿಕ ಹಿಂಸೆ ನೀಡುತ್ತಿದ್ದಾರೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.

ಸಮಿತಿಯ ಸರೋಜಮ್ಮ, ನಾಗರತ್ನ, ಕುಳ್ಳ, ರೂಪ, ಬೂದನೂರು ಸತೀಶ್, ಕಾರ್ತಿಕ್, ಸುನೀಲ್ ನೇತೃತ್ವ ವಹಿಸಿದ್ದರು.

ಹಿಂದಿನ ಲೇಖನಜಮೀನು ವಿಚಾರಕ್ಕೆ ಎರಡು ಕುಟುಂಬಗಳ ನಡುವೆ ಹೊಡೆದಾಟ: ಓರ್ವ ಸಾವು
ಮುಂದಿನ ಲೇಖನಜೆಡಿಎಸ್-ಬಿಜೆಪಿ ಮೈತ್ರಿಯಿಂದ ಲೋಕಸಭೆ ಚುನಾವಣೆಯಲ್ಲಿ ಹೆಚ್ಚಿನ ಲಾಭ: ಕ್ರಿಶನ್ ಪಾಲ್ ಗುರ್ಜರ್