ಮನೆ ಸ್ಥಳೀಯ ದೇವರ ಹೆಸರಲ್ಲಿ ಮನುಷ್ಯರ ನಡುವೆ ಗೋಡೆ ಕಟ್ಟುವುದು-ದ್ವೇಷಿಸುವುದು ದೇವರಿಗೆ ಒಪ್ಪಿಗೆ ಆಗುವುದಿಲ್ಲ: ಮುಖ್ಯಮಂತ್ರಿ ಸಿದ್ದರಾಮಯ್ಯ

ದೇವರ ಹೆಸರಲ್ಲಿ ಮನುಷ್ಯರ ನಡುವೆ ಗೋಡೆ ಕಟ್ಟುವುದು-ದ್ವೇಷಿಸುವುದು ದೇವರಿಗೆ ಒಪ್ಪಿಗೆ ಆಗುವುದಿಲ್ಲ: ಮುಖ್ಯಮಂತ್ರಿ ಸಿದ್ದರಾಮಯ್ಯ

0

ನಂಜನಗೂಡು ನ 17: ದೇವರ ಹೆಸರಲ್ಲಿ ಮನುಷ್ಯರ ನಡುವೆ ಗೋಡೆ ಕಟ್ಟುವುದು-ದ್ವೇಷಿಸುವುದು ದೇವರಿಗೆ ಒಪ್ಪಿಗೆ ಆಗುವುದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ನುಡಿದರು.

ನಂಜನಗೂಡು ಕ್ಷೇತ್ರದ ಕಳಲೆ ಗ್ರಾಮದಲ್ಲಿ ಜೀರ್ಣೋದ್ಧಾರಗೊಂಡ ಚಾರಿತ್ರಿಕ ಕಡೇಮಾಲಮ್ಮ ದೇವಸ್ಥಾನವನ್ನು ಉದ್ಘಾಟಿಸಿ ದೇವಿಗೆ ವಿಶೇಷ ಪೂಜೆ ಸಲ್ಲಿಸಿ ಮಾತನಾಡಿದರು.

ಕಡೇಮಾಲಮ್ಮ ದೇವಸ್ಥಾನ ಉದ್ಘಾಟಿಸಲು ಬಹಳ ಖುಷಿ ಆಗಿದೆ. ದೇವಿಯಿಂದ ಇಡಿ ಕಳಲೆ ಗ್ರಾಮಕ್ಕೆ ಒಳ್ಳೆಯದಾಗಲಿ ಎಂದು ಪ್ರಾರ್ಥಿಸಿದ್ದೀನಿ. ನನಗೆ ಈ ಊರಿನ ಪರಿಚಯ ಚೆನ್ನಾಗಿದೆ. ಈ ಊರಲ್ಲಿ ಎಲ್ಲಾ ಧರ್ಮ ಮತ್ತು ಜಾತಿಯವರು ಸಹಬಾಳ್ವೆಯಿಂದ, ಸೌಹಾರ್ದತೆಯಿಂದ ಬದುಕುತ್ತಿರುವುದು ಮಾದರಿ ಮತ್ತು ಆದರ್ಶವಾಗಿದೆ. ಸಮಾಜದಲ್ಲಿ ಬಡವ ಶ್ರೀಮಂತ, ಮೇಲು-ಕೀಳಿಗೆ ಜಾತಿ ವ್ಯವಸ್ಥೆಯೇ ಕಾರಣ. ಆದರೆ ಕಳಲೆ ಗ್ರಾಮದಲ್ಲಿ ಸರ್ವ ಜಾತಿಗಳ ಸೌಹಾರ್ದದ ಬದುಕು ಆಚರಣೆಯಲ್ಲಿದೆ ಎಂದು ಮೆಚ್ಚುಗೆ ಸೂಚಿಸಿದರು.

ಎಲ್ಲಾ ಜಾತಿ-ಧರ್ಮದ ಬಡವರಿಗೆ ಆರ್ಥಿಕ ಶಕ್ತಿ ಬಾರದ ಹೊರತು ಅಸಮಾನತೆ ಕಡಿಮೆ ಆಗಲು ಸಾಧ್ಯವಿಲ್ಲ. ಈ ಕಾರಣಕ್ಕೇ ನಮ್ಮ ಸರ್ಕಾರ ಆರ್ಥಿಕವಾಗಿ ಜನರಿಗೆ ಶಕ್ತಿ ತುಂಬುವ ಕೆಲಸ ಮಾಡಿದ್ದೇವೆ ಎಂದರು.

ನಮ್ಮ ಗ್ಯಾರಂಟಿ ಯೋಜನೆಗಳನ್ನು ಟೀಕಿಸುತ್ತಿದ್ದ ಪ್ರದಾನಿ ನರೇಂದ್ರ ಮೋದಿಯವರೇ ಈಗ ಗ್ಯಾರಂಟಿಗಳನ್ನು ಕೊಡುತ್ತಿದ್ದಾರೆ. ಹೆಚ್.ಡಿ.ಕುಮಾರಸ್ವಾಮಿ ಅವರಿಗೂ ಗ್ಯಾರಂಟಿ ಯೋಜನೆಗಳ ಬಗ್ಗೆ ಹೊಟ್ಟೆಕಿಚ್ಚು ಬಂದು ಬಿಟ್ಟಿದೆ. ಆದರೆ, ನಾವು ಯಾರಿಗೇ ಹೊಟ್ಟೆಕಿಚ್ಚು ಬಂದರೂ ಜನರಿಗೆ ಆರ್ಥಿಕ ಶಕ್ತಿ ತುಂಬುವ ಕೆಲಸ ಮಾಡುತ್ತಲೇ ಇರುತ್ತೇವೆ ಎಂದರು.

ಯಾವ ಸಮಾಜದಲ್ಲಿ ಒಗ್ಗಟ್ಟು ಇರುವುದಿಲ್ಲವೋ ಆ ಸಮಾಜ ಉಳಿಯಲು ಸಾಧ್ಯವಿಲ್ಲ. ಆದರೆ ಭಾರತದ ಎಲ್ಲಾ ಸಂಸ್ಥಾನಗಳೂ ಒಟ್ಟಾಗಿ ಗಟ್ಟಿಯಾಗಿ ಸೌಹಾರ್ದತೆ ಬೆಳೆಸಿಕೊಂಡಿದೆ. ಐತಿಹಾಸಿಕ ಇತಿಹಾಸ ಹೊಂದಿರುವ ಕಳಲೆ ಗ್ರಾಮ ಕೂಡ ಈ ಸಂಸ್ಕೃತಿಗೆ ಒಗ್ಗಿಕೊಂಡಿದೆ. ಇಲ್ಲಿನ ಲಕ್ಷ್ಮೀಕಾಂತ ದೇವಸ್ಥಾನದ ಜಾತ್ರೆ ಐತಿಹಾಸಿಕವಾಗಿದೆ ಎಂದು ವಿವರಿಸಿದರು.

ಶುದ್ದವಾದ ಮನಸ್ಸು ಇಲ್ಲದೆ ಮಾಡುವ ಪೂಜೆಯನ್ನು ದೇವರು ಸ್ವೀಕರಿಸುವುದಿಲ್ಲ. ಸರ್ವರ ಒಳಿತಿನ ಪೂಜೆ ಮಾತ್ರ ಸ್ವೀಕಾರಗೊಳ್ಳುತ್ತದೆ. ಸ್ವಾರ್ಥರಹಿತ ಪೂಜೆ ಮಾತ್ರ ದೇವರಿಗೆ ಸಲ್ಲುತ್ತದೆ. ಮನುಷ್ಯರಾದವರು ಮನುಷ್ಯರನ್ನು ಮನುಷ್ಯತ್ವದ ಆಧಾರದಲ್ಲಿ ಪ್ರೀತಿಸಬೇಕು. ಜಾತಿ ಆಧಾರದಲ್ಲಿ ಪ್ರೀತಿಸುವುದು ಮನುಷ್ಯ ಪ್ರೀತಿ ಆಗುವುದಿಲ್ಲ ಎಂದರು.

ಶಾಸಕ ದರ್ಶನ್ ದ್ರುವನಾರಾಯಣ್ ಅವರು ಕಳಲೆ ಗ್ರಾಮದ ಅಭಿವೃದ್ಧಿಗಾಗಿ ಇಟ್ಟಿರುವ ಎಲ್ಲಾ ಬೇಡಿಕೆಗಳನ್ನೂ ನಾನು ಈಡೇರಿಸುತ್ತೇನೆ ಎಂದು ಇದೇ ಸಂದರ್ಭದಲ್ಲಿ ಮುಖ್ಯಮಂತ್ರಿಗಳು ಭರವಸೆ ನೀಡಿ, ನಿಮ್ಮ ಆಶೀರ್ವಾದ ಯಾವಾಗಲೂ ದರ್ಶನ್ ದ್ರುವನಾರಾಯಣ್ ಮೇಲೆ ಇರಲಿ ಎಂದರು.

ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಹೆಚ್.ಸಿ. ಮಹದೇವಪ್ಪ, ಜಿಲ್ಲೆಯ ಶಾಸಕರುಗಳಾದ ದರ್ಶನ್ ದ್ರುವನಾರಾಯಣ್, ರವಿಶಂಕರ್, ಅನಿಲ್ ಚಿಕ್ಕಮಾದು, ಹರೀಶ್ ಗೌಡ, ಡಾ.ತಿಮ್ಮಯ್ಯ, ಮಾಜಿ ಶಾಸಕಕರುಗಳಾದ ಯತೀಂದ್ರ ಸಿದ್ದರಾಮಯ್ಯ, ಸೋಮಶೇಖರ್, ಕಳಲೆ ಕೇಶವಮೂರ್ತಿ ಸೇರಿ ಹಲವು ಮುಖಂಡರು ಉಪಸ್ಥಿತರಿದ್ದರು.