ಬೆಂಗಳೂರು: ನಗರದ ಹೆಣ್ಣೂರು ಬಳಿ ಇರುವ ಬಾಬುಸಾಬ್‌ಪಾಳ್ಯದಲ್ಲಿ ನಿರ್ಮಾಣ ಹಂತದ ಕಟ್ಟಡ ಕುಸಿದು ಘೋರ ದುರಂತ ಸಂಭವಿಸಿದೆ.
ಸಾವಿನ ಸಂಖ್ಯೆ 8ಕ್ಕೆ ಏರಿಕೆ ಆಗಿದೆ. ಇದೀಗ ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ತವ್ಯಲೋಪ ಹಿನ್ನೆಲೆಯಲ್ಲಿ ಬಿಬಿಎಂಪಿ ಹೊರಮಾವು ಉಪವಿಭಾಗದ ಎಇಇ ಕೆ.ವಿನಯ್ ಅಮಾನತುಗೊಳಿಸಿ ಬಿಬಿಎಂಪಿ ಮುಖ್ಯ ಆಯುಕ್ತರಿಂದ ಆದೇಶ ಹೊರಡಿಸಲಾಗಿದೆ.
ಕಟ್ಟಡ ತೆರವಿಗೆ ಸ್ಥಿರೀಕರಣ ಆದೇಶ ಹೊರಡಿಸಿದ್ದರೂ ಎಇಇ ಕೆ.ವಿನಯ್ ನಿಗದಿತ ಅವಧಿಯೊಳಗೆ ಕ್ರಮಕೈಗೊಂಡಿಲ್ಲ. ಮೇಲ್ನೋಟಕ್ಕೆ 8 ಕಾರ್ಮಿಕರ ಸಾವಿಗೆ ಕಾರಣಕರ್ತರಾಗಿದ್ದಾರೆ. ಹೀಗಾಗಿ ಅವರನ್ನು ಅಮಾನತುಗೊಳಿಸಿ ಆದೇಶಿಸಲಾಗಿದೆ.
ಕಟ್ಟಡ ಮಾಲೀಕಗೆ ಬಿಬಿಎಂಪಿ ಅಧಿಕಾರಿಗಳಿಂದ ಮೂರು ಬಾರಿ ನೋಟಿಸ್
ಕಟ್ಟಡ ಮಾಲೀಕ ಮುನಿರಾಜ್ ರೆಡ್ಡಿಗೆ ಬಿಬಿಎಂಪಿ ಅಧಿಕಾರಿಗಳು ಮೂರು ಬಾರಿ ನೋಟಿಸ್ ನೀಡಿದ್ದರು. ಏಪ್ರಿಲ್ನಲ್ಲೇ ಕಟ್ಟಡ ನಿರ್ಮಾಣ ಬಗ್ಗೆ ಬಿಬಿಎಂಪಿ ನೋಟಿಸ್ ನೀಡಿದ್ರೂ ಮಾಲೀಕ ಯಾವುದೇ ಉತ್ತರ ನೀಡಿರಲಿಲ್ಲ.
40X60 ಅಳತೆಯಲ್ಲಿ ನಕ್ಷೆ ಮುಂಜೂರಾತಿ ಪಡೆಯದೆ ಮುನಿರಾಜ್ ರೆಡ್ಡಿ ಕಟ್ಟಡ ನಿರ್ಮಿಸುತ್ತಿದ್ದ. 3 ಅಂತಸ್ತಿನ ಕಟ್ಟಡ ಕಟ್ಟುವಾಗಲೇ ಪಾಲಿಕೆ ದಾಖಲೆ ಕೇಳಿತ್ತು. ಏಪ್ರಿಲ್ನಲ್ಲಿ 1, ಸೆಪ್ಟೆಂಬರ್ನಲ್ಲಿ 2 ನೋಟಿಸ್ ನೀಡಲಾಗಿತ್ತು. ಯಾವುದೇ ನೋಟಿಸ್ಗೂ ಮಾಲೀಕ ಉತ್ತರವನ್ನೇ ನೀಡಿರಲಿಲ್ಲ. ಹೀಗಾಗಿ ಪಾಲಿಕೆ ಅಧಿಕಾರಿಗಳು ಯಾವುದೇ ಕ್ರಮಕ್ಕೆ ಮುಂದಾಗಿರಲಿಲ್ಲ.