ಬೆಂಗಳೂರು(Bengaluru): ಮಧ್ಯಮ ಹಾಗೂ ಕೆಳ ವರ್ಗಗಳ ಜನರು ನೆಮ್ಮದಿಯಿಂದ ಜೀವನ ನಡೆಸಲು ಅನುಕೂಲವಾಗುವಂತೆ ಗೃಹಮಂಡಳಿ ವತಿಯಿಂದ ನಿರ್ಮಿಸಲಾಗಿರುವ ಡೈಮಂಡ್ ಬಹುಮಹಡಿ ಕಟ್ಟಡದ ಕಾಮಗಾರಿಯಲ್ಲಿ ಹಲವಾರು ಸಮಸ್ಯೆಗಳು ಕಂಡುಬಂದಿದ್ದು ಜೂನ್ 10 ರೊಳಗೆ ಅವುಗಳನ್ನು ಸರಿಪಡಿಸಬೇಕೆಂದು ವಸತಿ ಮತ್ತು ಮೂಲ ಸೌಲಭ್ಯ ಅಭಿವೃದ್ದಿ ಸಚಿವರಾದ ವಿ ಸೋಮಣ್ಣ ಅವರು ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಕೆಂಗೇರಿ ಬಂಡೇಮಠದಲ್ಲಿ ಕರ್ನಾಟಕ ಗೃಹಮಂಡಳಿ ವತಿಯಿಂದ ನಿರ್ಮಿಸಲಾಗಿರುವ ಡೈಮಂಡ್ ಬಹುಮಹಡಿ ಕಟ್ಟಡದ ಪರಿಶೀಲನೆ ನಡೆಸಿ ಮಾತನಾಡಿದ ಸಚಿವರು ಈ ಕಟ್ಟಡ ಕಾಮಗಾರಿಯಲ್ಲಿ ಕಂಡುಬಂದಿರುವ ಸಮಸ್ಯೆಗಳಿಂದಾಗಿ ಇಲ್ಲಿ ವಾಸವಾಗಿರುವ ಜನರಿಗೆ ತೊಂದರೆಯಾಗುತ್ತಿದ್ದು, ಅಧಿಕಾರಿಗಳು ಈ ಕೂಡಲೇ ಕ್ರಮ ಕೈಗೊಂಡು ಸಮಸ್ಯೆಯನ್ನು ಬಗೆಹರಿಸಬೇಕು ಇಲ್ಲವಾದಲ್ಲಿ ಅಂತಹ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮಕೈಗೊಳ್ಳಲಾಗುವುದೆಂದು ಎಚ್ಚರಿಸಿದರು.
ಈ ಕಟ್ಟಡದ ಕಾಮಗಾರಿಯು 2011ರಲ್ಲಿ ಪ್ರಾರಂಭಗೊಂಡು 2015 ರಲ್ಲಿ ಪೂರ್ಣಗೊಳಿಸಲಾಯಿತು. 3.55 ಎಕರೆ ಪ್ರದೇಶದಲ್ಲಿ ಕಟ್ಟಡವನ್ನು ನಿರ್ಮಿಸಲಾಗಿದ್ದು , ಒಟ್ಟು 366 ಪ್ಲಾಟ್ ಗಳನ್ನು ಹೊಂದಿದೆ. ಈಗಾಗಲೇ 238 ಫ್ಲಾಟ್ ಗಳನ್ನು ಹಂಚಿಕೆ ಮಾಡಲಾಗಿದ್ದು. 78 ಫ್ಲಾಟ್ ಗಳು ಹಂಚಿಕೆಯಾಗದೇ ಹಾಗೆ ಬಾಕಿ ಉಳಿದಿದೆ ಎಂದರು.
ನಿರ್ಮಾಣಗೊಂಡಿರುವ ಕಟ್ಟಡದ ಟೆರೇಸ್ ನಲ್ಲಿ ಅನೇಕ ಬಿರುಕು ಕಂಡುಬಂದಿದ್ದು, ನೀರು ಸೋರಿಕೆ ಮತ್ತು ಪ್ಲಾಸ್ಟರಿಂಗ್ ಹಾಳಗಿರುವುದು ಕಂಡುಬಂದಿದೆ.
ಅಧಿಕಾರಿಗಳು ಕೂಡಲೇ ಎಚ್ಚೆತ್ತು ಕೊಂಡು ಹಾಳಾಗಿರುವ ಕಾಮಗಾರಿಗಳನ್ನು ಶೀಘ್ರವಾಗಿ ದುರಸ್ತಿಗೊಳಿಸಬೇಕು. ಗುಣಮಟ್ಟದಲ್ಲಿ ಯಾವುದೇ ಕೊರತೆ ಆಗದಂತೆ ಕಾರ್ಯನಿರ್ವಹಿಸಬೇಕು ಎಂದರು.
ಪ್ರತಿ ಒಂದು ರೂಪಾಯಿ ಕೂಡ ಬಡವರ ತೆರಿಗೆ ಹಣವಾಗಿದ್ದು, ಎಷ್ಟೋ ಜನರು ಮನೆಯನ್ನು ಸಾಲ ಮಾಡಿ ಖರೀದಿಸಿರುತ್ತಾರೆ ಸಾಲವನ್ನು ತೀರಿಸಲಾಗದೆ ಅನೇಕರು ಮನೆಯನ್ನು ಮಾರಿ ಹೋಗಿರುವಂತ ಉದಾಹರಣೆಗಳಿವೆ. ಈ ಕಟ್ಟಡದ ನಿರ್ವಹಣೆಯಲ್ಲಿ ಕೂಡ ಅನೇಕ ಲೋಪಗಳು ಕಂಡುಬಂದಿದೆ. ಕೂಡಲೇ ಅಧಿಕಾರಿಗಳು ಕಾರ್ಯಪ್ರವೃತ್ತರಾಗಿ ಸಮಸ್ಯೆ ಬಗೆಹರಿಸಬೇಕು ಎಂದು ಹೇಳಿದರು.
ಇಲ್ಲಿ ವಾಸಿಸುವ ನಿವಾಸಿಗಳು ಯಾವುದೇ ರೀತಿ ಆತಂಕವನ್ನು ಪಡುವ ಅಗತ್ಯವಿಲ್ಲ. ಇಲ್ಲಿರುವ ನ್ಯೂನತೆಗಳನ್ನು ತ್ವರಿತವಾಗಿ ಬಗೆಹರಿಸುವುದರ ಜೊತೆಗೆ ಕಟ್ಟಡ ಕಾಮಗಾರಿಗಳ ದುರಸ್ತಿಯನ್ನು ಮಾಡಲಾಗುವುದೆಂದು ಸಚಿವರು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ವಸತಿ ಆಯುಕ್ತರಾದ ಡಿ.ಎಸ್.ರಮೇಶ್, ವಸತಿ ಮುಖ್ಯ ಇಂಜಿನೀಯರ್ ಆದ ಡಿ.ಟಿ ನಂಜುಂಡಪ್ಪ, ಬಿಬಿಎಂಪಿ ಜಂಟಿ ಆಯುಕ್ತರಾದ ನಾಗರಾಜು, ಬಿಬಿಎಂಪಿ ಮುಖ್ಯ ಇಂಜಿನೀಯರ್ ವಿಜಯ ಕುಮಾರ್ ಮತ್ತು ಸಂಬಂಧಪಟ್ಟ ಅಧಿಕಾರಿಗಳು ಉಪಸ್ಥಿತರಿದ್ದರು.