ಬೆಂಗಳೂರು : ಎರಡು ಪ್ರತ್ಯೇಕ ಮನೆಗಳವು ಪ್ರಕರಣಗಳಲ್ಲಿ ಮಹಿಳಾ ರೌಡಿ ಶೀಟರ್ ಸೇರಿ ನಾಲ್ವರನ್ನು ಬಂಧಿಸಿರುವ ಬೊಮ್ಮನಹಳ್ಳಿ ಠಾಣೆ ಪೊಲೀಸರು, 14 ಲಕ್ಷ ಮೌಲ್ಯದ 160 ಗ್ರಾಂ ಚಿನ್ನಾಭರಣ ಮತ್ತು ಆಟೋ ರಿಕ್ಷಾವನ್ನು ಜಪ್ತಿ ಮಾಡಿದ್ದಾರೆ. ಬಂಧಿತರಲ್ಲಿ ಡಿ.ಜೆ.ಹಳ್ಳಿಯ ರೌಡಿ ಶೀಟರ್ ಮತ್ತು ರಾಪಿಡೋ ಬೈಕ್ ಸವಾರ ಸೇರಿದ್ದಾರೆ.
ಕಳ್ಳರ ಗ್ಯಾಂಗ್ ಮೊದಲೇ ಪ್ಲಾನ್ ಮಾಡಿಕೊಂಡಂತೆ ಬೀಗ ಹಾಕಿದ, ಒಂಟಿಯಾಗಿ ಬಿಟ್ಟಿರುವ ಮನೆಗಳ ಮೇಲೆ ನೋಟ ಇಟ್ಟು, ನಂತರ ಸಮಯ ಆಯ್ದು ಬೀಗ ಮುರಿದು ಕಳವು ಮಾಡುತ್ತಿದ್ದರು. ಈ ವೇಳೆ ಅವರು ಬಳಸುತ್ತಿದ್ದ ಆಟೋ ರಿಕ್ಷಾ ಸಹ ಪೊಲೀಸರು ವಶಪಡಿಸಿಕೊಳ್ಳಲಾಗಿದೆ. ಶಬರೀನ್ ತಾಜ್ (38) ಮತ್ತು ನೀಲಂ ಅಲಿಯಾಸ್ ನೀಲೋಫರ್ (22) ಬಂಧಿತರು. ಇವರಿಂದ ₹11 ಲಕ್ಷ ಮೌಲ್ಯದ 130 ಗ್ರಾಂ ಚಿನ್ನಾಭರಣ ಹಾಗೂ ಕೃತ್ಯಕ್ಕೆ ಬಳಸಿದ ಆಟೋವನ್ನು ಜಪ್ತಿ ಮಾಡಲಾಗಿದೆ.
ಆರೋಪಿ ನೀಲಂ ಬಾಲ್ಯದಲ್ಲೇ ಪೋಷಕರನ್ನು ಕಳೆದುಕೊಂಡು, ಡಿಜೆ ಹಳ್ಳಿಯ ಶಬರೀನ್ ತಾಜ್ ಮನೆಗೆ ಸೇರಿದ್ದಳು. ಅಲ್ಲಿ ಬೆಳೆದ ಬಳಿಕ, ಜೀವನೋಪಾಯಕ್ಕಾಗಿ ಇಳಿದ ದಾರಿ ಕಾನೂನು ಬಾಹಿರ ಕೃತ್ಯ. ಇಬ್ಬರು ಸೇರಿಕೊಂಡು ಮನೆಯಲ್ಲಿ ಬೀಗ ಹಾಕಿರುವುದನ್ನು ಲಕ್ಷ್ಯವಿಟ್ಟು ನಂತರ ಕಳವು ಮಾಡುತ್ತಿದ್ದರೆಂದು ಪೊಲೀಸರು ತಿಳಿಸಿದರು. ವಿಚಾರಣೆಯಲ್ಲಿ ಸಿಕ್ಕ ಮಾಹಿತಿಯ ಪ್ರಕಾರ, ನೀಲಂ ತಲೆ ಕೂದಲು ಕಡಿದು, ಪುರುಷರಂತೆ ಪ್ಯಾಂಟ್ ಶರ್ಟ್ ಧರಿಸಿ ಆಟೋನಲ್ಲಿ ಶಬರೀನ್ ತಾಜ್‌ರನ್ನು ಕೂರಿಸಿಕೊಂಡು ನಗರದ ಹಲವೆಡೆ ಸುತ್ತಾಡುತ್ತಿದ್ದರು. ಈ ಹಿಂದೆ ಬಾಗಲಕುಂಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಹಾಡಹಗಲೇ ಕಳವು ಮಾಡಿ ಜೈಲಿಗೆ ಹೋಗಿದ್ದರು. ಜಾಮೀನಿನ ಮೇಲೆ ಹೊರಬಂದ ಬಳಿಕವೂ ಈ ಮಹಿಳೆಯರು ತಮ್ಮ ಕಳವು ಚಟುವಟಿಕೆಯನ್ನು ಮುಂದುವರೆಸಿದ್ದರು.
ಇನ್ನೊಂದು ಪ್ರತ್ಯೇಕ ಪ್ರಕರಣದಲ್ಲಿ, ಇಬ್ಬರು ಪುರುಷರು ಕೂಡ ಬೀಗ ಹಾಕಿದ ಮನೆಗಳ ಮೇಲೆ ನೋಟ ಇಟ್ಟು ಕಳವು ನಡೆಸಿದ ಆರೋಪದಲ್ಲಿ ಬಂಧಿತರಾಗಿದ್ದಾರೆ. ರಾಜು ದಾಸನ್ (39) ಮತ್ತು ಜಿಬಿನ್ ಸರ್ಕಾರ್ (28) ಬಂಧಿತರು. ಇವರಿಂದ ₹3 ಲಕ್ಷ ಮೌಲ್ಯದ 30 ಗ್ರಾಂ ಚಿನ್ನಾಭರಣ ವಶಪಡಿಸಿಕೊಳ್ಳಲಾಗಿದೆ.
ಪಶ್ಚಿಮ ಬಂಗಾಳ ಮೂಲದ ರಾಜು ದಾಸನ್ ಬೆಂಗಳೂರಿನಲ್ಲಿ ರಾಪಿಡೋ ಬೈಕ್ ಚಾಲಕನಾಗಿ ಕೆಲಸ ಮಾಡುತ್ತಿದ್ದನು. ಜಿಬಿನ್ ಬೆಂಗಳೂರಿನ ಹೋಟೆಲ್ ಒಂದರಲ್ಲಿ ಉದ್ಯೋಗದಲ್ಲಿದ್ದ. ಇತ್ತೀಚೆಗೆ ಇಬ್ಬರೂ ಸೇರಿಕೊಂಡು ಕಾವೇರಿನಗರದ ಮನೆಯ ಬೀಗ ಮುರಿದು ಚಿನ್ನಾಭರಣ ಕದ್ದಿದ್ದರು. ದೂರಿನ ಆಧಾರದಲ್ಲಿ ನಡೆಸಿದ ತನಿಖೆಯಲ್ಲಿ ಇವರ ಬಂಧನ ಸಾಧ್ಯವಾಯಿತು.














