ಮಂಗಳೂರು : ಧರ್ಮಸ್ಥಳದ ಬುರುಡೆ ಪ್ರಕರಣ ಸಂಬಂಧಿಸಿದಂತೆ ಎಸ್‌ಐಟಿ ತನಿಖೆ ಚುರುಕುಗೊಳಿದ್ದು, ಚಿನ್ನಯ್ಯನಿಗೆ ಆಶ್ರಯ ನೀಡಿದ ಆರೋಪದಲ್ಲಿ ಮಹೇಶ್ ತಿಮರೋಡಿ ಮನೆಗೆ ಪೊಲೀಸರು ರೇಡ್ ಮಾಡಿದ್ದಾರೆ. ಈ ನಡುವೆ ಮಹೇಶ್ ಶೆಟ್ಟಿ ತಿಮರೋಡಿ ನಾಪತ್ತೆಯಾಗಿದ್ದು, ಬಂಧನ ಭೀತಿ ಎದುರಾಗಿದೆ.
ಧರ್ಮಸ್ಥಳ ಗ್ರಾಮದಲ್ಲಿ ನೂರಾರು ಶವಗಳನ್ನು ಹೂತಿಟ್ಟ ಪ್ರಕರಣದ ತನಿಖೆಯನ್ನು ಎಸ್‌ಐಟಿ ಮುಂದುವರಿಸಿದೆ. ಆರೋಪಿ ಚಿನ್ನಯ್ಯನಿಗೆ ಆಶ್ರಯ ಕೊಟ್ಟ ಮಹೇಶ್ ಶೆಟ್ಟಿ ತಿಮರೋಡಿ ಮನೆಯನ್ನು ಎಸ್‌ಐಟಿ ಜಾಲಾಡಿದೆ.
ಈ ಪ್ರಕರಣದ ಆರಂಭದ ದಿನದಿಂದಲೂ ಮಹೇಶ್ ಶೆಟ್ಟಿ ತಿಮರೋಡಿ ಮನೆಯಲ್ಲಿ ವಾಸ್ತವ್ಯವಿದ್ದ ಚಿನ್ನಯ್ಯನಿಗೆ ಪ್ರತ್ಯೇಕ ಕೊಠಡಿಯ ವ್ಯವಸ್ಥೆಯನ್ನು ಮಾಡಲಾಗಿತ್ತು. ಪ್ರಮುಖ ಆರೋಪಿಗೆ ಆಶ್ರಯ ಕೊಟ್ಟ ಆರೋಪದಡಿ ತಿಮರೋಡಿ ಮನೆಯಲ್ಲಿ ಎಸ್‌ಐಟಿ ಶೋಧ ಕಾರ್ಯ ನಡೆಸಿದೆ.
ನೆನ್ನೆ (ಮಂಗಳವಾರ) ಉಜಿರೆಯ ತಿಮರೋಡಿ ಮನೆಗೆ ದಿಢೀರ್ ರೇಡ್ ಮಾಡಿ ಬೆಳ್ತಂಗಡಿ ಎಸ್‌ಐಟಿ ತಂಡ ಶೋಧ ಕಾರ್ಯ ನಡೆದಿತ್ತು. ಎಸ್‌ಐಟಿ ಬರುವ ಸುದ್ದಿ ತಿಳಿದು ಮಹೇಶ್ ತಿಮರೋಡಿ ಮನೆಯಿಂದ ಪರಾರಿಯಾಗಿದ್ದಾರೆ. ಮಹೇಶ್ ತಿಮರೋಡಿ ಮನೆಯಿಂದ ಸ್ವಲ್ಪ ದೂರದಲ್ಲಿರುವ ಸಹೋದರ ಮೋಹನ್ ಕುಮಾರ್ ಶೆಟ್ಟಿ ಮನೆಯಲ್ಲೂ ಎಸ್‌ಐಟಿ ಶೋಧ ಮಾಡಲಾಗಿದೆ.
ಮಹೇಶ್ ಶೆಟ್ಟಿ ತಿಮರೋಡಿ ಮನೆಯಲ್ಲಿ ಚಿನ್ನಯ್ಯ ವಾಸ್ತವ್ಯವಿದ್ದ ಕೋಣೆಯಲ್ಲಿ ಆತ ಬಳಸುತ್ತಿದ್ದ ಮೊಬೈಲ್ ಪತ್ತೆಯಾಗಿದೆ. ಎಸ್‌ಐಟಿ ಅಧಿಕಾರಿಗಳು ಮೊಬೈಲ್ ವಶಕ್ಕೆ ಪಡೆದುಕೊಂಡಿದ್ದಾರೆ. ಜೊತೆಗೆ ಚಿನ್ನಯ್ಯ ಬಳಸುತ್ತಿದ್ದ ವಸ್ತ್ರ, ಆತ ಊರಿಂದ ತಂದಿದ್ದ ಬ್ಯಾಗ್‌ಗಳನ್ನು ಕೂಡ ವಶಪಡಿಸಿಕೊಳ್ಳಲಾಗಿದೆ.
ನಿರಂತರವಾದ ತನಿಖೆ ವೇಳೆ ಹಲವು ಮಹತ್ವದ ವಿಚಾರಗಳು ಎಸ್‌ಐಟಿಗೆ ಲಭ್ಯವಾಗಿದ್ದು, ಮಹೇಶ್ ಶೆಟ್ಟಿ ತಿಮರೋಡಿ ಮನೆಯ ಸಿಸಿ ಕ್ಯಾಮೆರಾ ಎಸ್‌ಐಟಿ ವಶಕ್ಕೆ ಪಡೆದುಕೊಂಡಿದೆ. ತಿಮರೋಡಿ ಸಿಗದೇ ಇರೋದ್ರಿಂದ ನೋಟೀಸ್ ನೀಡಿ ಬಳಿಕ ಸುಳ್ಳು ಬುರುಡೆ ಕೇಸ್‌ನಲ್ಲಿ ಬಂಧನ ಮಾಡೋ ಸಾಧ್ಯತೆಯೂ ಇದೆ.
ಇಷ್ಟೆಲ್ಲಾ ಬೆಳವಣಿಗೆಯ ನಡುವೆ ಎಸ್‌ಐಟಿ ತನಿಖೆ ಮಾತ್ರ ನಿಗೂಢವಾಗಿಯೇ ನಡೆಯುತ್ತಿದೆ. ಒಟ್ಟಿನಲ್ಲಿ ಎಸ್‌ಐಟಿ ತನಿಖೆ ಕ್ಷಿಪ್ರ ಗತಿಯಲ್ಲಿ ನಡೆಸಲಾಗುತ್ತಿದೆ. ತನಿಖೆ ವಿವಿಧ ಆಯಾಮಗಳಲ್ಲಿ ನಡೆಯುತ್ತಿದ್ದು, ಸತ್ಯ ಏನಿದೆ ಅನ್ನೋದೇ ಕುತೂಹಲ ಹುಟ್ಟು ಹಾಕಿದೆ.















