ಮಂಗಳೂರು: ರಸ್ತೆ ದಾಟುತ್ತಿದ್ದಾಗ ಬಸ್ ಡಿಕ್ಕಿ ಹೊಡೆದ ಪರಿಣಾಮ ಮಹಿಳೆಯೊಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಐರಿನ್ ಡಿಸೋಜಾ (65) ಮೃತ ದುರ್ದೈವಿಯಾಗಿದ್ದಾರೆ.
ಅವರು ಸರಿಪಳ್ಳದಿಂದ ಮಂಗಳೂರಿಗೆ ತೆರಳುತ್ತಿದ್ದ ಖಾಸಗಿ ಬಸ್ ನಲ್ಲಿ ಬಂದು ಇಳಿದ ಐರಿನ್ ಡಿಸೋಜಾ ರಸ್ತೆ ದಾಟಲು ಮುಂದಾಗಿದ್ದಾರೆ. ಈ ವೇಳೆ ವೇಗವಾಗಿ ಬರುತ್ತಿದ್ದ ಬಸ್, ಐರಿನ್ ಡಿಸೋಜಾಗೆ ಡಿಕ್ಕಿ ಹೊಡೆದಿದೆ. ಬಸ್ಸಿನ ಮುಂಭಾಗದ ಚಕ್ರ ಮಹಿಳೆಯ ಮೇಲೆ ಹರಿದ ಪರಿಣಾಮ ಆಕೆ ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ.
ಘಟನೆ ನಂತರ ಬಸ್ ಸಹಿತವಾಗಿ ಚಾಲಕ ಸ್ಥಳದಿಂದ ಪರಾರಿಯಾಗಿದ್ದಾನೆ.
ಘಟನಾ ಸ್ಥಳಕ್ಕೆ ಸಂಚಾರ ಎಸಿಪಿ ಹಾಗೂ ಇತರೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣವೂ ದಾಖಲಿಸಿಕೊಂಡಿದ್ದಾರೆ. ಇದೇ ವೇಳೆ ಸ್ಥಳದಲ್ಲಿ ಸಾರ್ವಜನಿಕರು ಮತ್ತು ಪೊಲೀಸರ ನಡುವೆ ವಾಗ್ವಾದವೂ ನಡೆಯಿತು. ಮೃತ ಮಹಿಳೆಯ ಪಾರ್ಥಿವ ಶರೀರವನ್ನು ಸಾರ್ವಜನಿಕರ ನೆರವಿನಿಂದ ವೆನ್ಲಾಕ್ ಆಸ್ಪತ್ರೆಗೆ ರವಾನಿಸಲಾಗಿದೆ.
ಘಟನೆ ದೃಶ್ಯಾವಳಿಗಳು ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಇದನ್ನೇ ಆಧರಿಸಿ ಆರೋಪಿಯ ಬಂಧನಕ್ಕೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ.














