ಚಿಂತಾಮಣಿ: ಚಿಂತಾಮಣಿ-ಕಡಪ ರಸ್ತೆಯಲ್ಲಿ ಗೋಪಲ್ಲಿ ಗೇಟ್ ಬಳಿ ಖಾಸಗಿ ಬಸ್ ಮತ್ತು ಕಾರು ನಡುವೆ ಮುಖಾಮುಖಿ ಡಿಕ್ಕಿಯಾಗಿ ಸಂಭವಿಸಿದ ಭೀಕರ ಅಪಘಾತದಲ್ಲಿ ಕಾರಿನಲ್ಲಿದ್ದ ಇಬ್ಬರು ಸಜೀವವಾಗಿ ದಹನವಾಗಿದ್ದು, ಮೂವರಿಗೆ ಗಾಯಗಳಾಗಿವೆ.
ಆಂಧ್ರಪ್ರದೇಶ ಕಡಪ ಮೂಲದವರಾಗಿದ್ದು ಹಾಲಿ ಬೆಂಗಳೂರಿನ ಮಹದೇವಪುರದಲ್ಲಿ ವಾಸವಾಗಿರುವ ಧನಂಜಯರೆಡ್ಡಿ(೩೧), ಕಳಾವತಿ(೫೦) ದಹನ ಹೊಂದಿರುವ ನತದೃಷ್ಟರು. ಮಹಾಲಕ್ಷ್ಮೀ(೬೦), ಶೋಭಾ(೨೮), ಮನ್ವಿತ್(೩) ಗಾಯಾಳುಗಳು. ಮೃತಪಟ್ಟವರು ಹಾಗೂ ಗಾಯಾಳು ಒಂದೇ ಕುಟುಂಬದವರು. ಕಡಪಾದಿಂದ ಬೆಂಗಳೂರಿಗೆ ಬರುತ್ತಿದ್ದರು.
ಕಡಪಾ ರಸ್ತೆಯಲ್ಲಿ ತಾಲ್ಲೂಕಿನ ಗೋಪಲ್ಲಿ ಗೇಟ್ ಬಳಿ ನಡುವೆ ಬೆಂಗಳೂರಿನಿಂದ-ತಿರುಪತಿಗೆ ಹೋಗುತ್ತಿದ್ದ ಖಾಸಗಿ ಬಸ್ ಅತಿಯಾದ ವೇಗದಿಂದ ಸಂಚರಿಸಿ ಮತ್ತೊಂದು ವಾಹನವನ್ನು ಹಿಂದಿಕ್ಕಲು ಹೋಗಿ ನೇರವಾಗಿ ಕಾರಿಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಎರಡು ವಾಹನಗಳು ರಸ್ತೆ ಬದಿಗೆ ಮುಗುಚಿಬಿದ್ದಿವೆ. ಕಾರಿಗೆ ಬೆಂಕಿ ಹತ್ತಿ ಉರಿದ ಪರಿಣಾಮ ಇಬ್ಬರು ಸಜೀವವಾಗಿ ಬೆಂದು ಕರಕಲಾಗಿದ್ದಾರೆ. ಮೂವರನ್ನು ಸ್ಥಳೀಯರು ಪಾರು ಮಾಡಿದ್ದಾರೆ. ಬಸ್ಸಿನಲ್ಲಿ ಸುಮಾರು ೬೦ ಜನರಿದ್ದರು. ಕೆಲವರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಗಾಯಾಳುಗಳಿಗೆ ನಗರ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ಕಾರಿನಲ್ಲಿದ್ದ ಐವರಲ್ಲಿ, ಚಾಲನೆ ಮಾಡುತ್ತಿದ್ದ ಧನಂಜಯರೆಡ್ಡಿ ಹಾಗೂ ಅವರ ತಾಯಿ ಕಳಾವತಿ ಇಬ್ಬರು ಸಜೀವದಹನವಾಗಿದ್ದಾರೆ. ಅವರ ಅಜ್ಜಿ ಮಹಾಲಕ್ಷ್ಮೀ, ಪತ್ನಿ ಶೋಭಾ ಮತ್ತು ಮಗ ಮಾನ್ವಿತ್ ಮೂವರು ಗಾಯಗೊಂಡಿದ್ದಾರೆ.
ಕೂಡಲೇ ಸ್ಥಳದಲ್ಲಿದ್ದವರು ಅಗ್ನಿಶಾಮಕ ದಳಕ್ಕೆ ಮತ್ತು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಅಗ್ನಿಶಾಮಕ ದಳದವರು ಸ್ಥಳಕ್ಕೆ ಆಗಮಿಸಿ ಕಾರಿನ ಬೆಂಕಿಯನ್ನು ನಂದಿಸಿದ್ದಾರೆ. ಆದರೆ ಆವೇಳೆಗಾಗಲೇ ಕಾರು ಸಂಪೂರ್ಣವಾಗಿ ಸುಟ್ಟುಹೋಗಿದೆ. ಕಡಪಾದಲ್ಲಿ ಸಂಬಂಧಿಕರೊಬ್ಬರು ಮೃತಪಟ್ಟಿದ್ದರಿಂದ ಶುಕ್ರವಾರ ಬೆಂಗಳೂರಿನಿಂದ ಹೋಗಿದ್ದೆವು. ಭಾನುವಾರ ಬೆಳಿಗ್ಗೆ ೬ ಗಂಟೆಗೆ ಹೊರಟು ಬೊಂಗಳೂರಿಗೆ ಹೋಗುತ್ತಿದ್ದೆವು. ಮದನಪಲ್ಲಿಯಲ್ಲಿ ಉಪಹಾರ ಸೇವಿಸಿ ಕಾರಿಗೆ ಪೆಟ್ರೋಲ್ ಹಾಕಿಸಿಕೊಂಡು ಬರುತ್ತಿದ್ದೆವು. ವೇಗವಾಗಿ ಬಂದ ಬಸ್ ನೇರವಾಗಿ ಡಿಕ್ಕಿ ಹೊಡೆಯಿತು ಎಂದು ಗಾಯಾಳು ಶೋಭಾ ಹೇಳಿದರು.
ಕೆಂಚಾರ್ಲಹಳ್ಳಿ ಪೊಲೀಸ್ ಠಾಣೆಯ ಇನ್ಸ್ ಸ್ಪೆಕ್ಟರ್ ವೆಂಕಟರವಣಪ್ಪ, ಗ್ರಾಮಾಂತರ ಠಾಣೆಯ ಇನ್ಸ್ ಸ್ಪೆಕ್ಟರ್ ಶಿವರಾಜ್, ಡಿವೈಎಸ್ಪಿ ಮುರಳೀಧರ್ ಸಿಬ್ಬಂದಿಯ ಜತೆ ಸ್ಥಳಕ್ಕೆ ಆಗಮಿಸಿ ಕ್ರಮಕೈಗೊಂಡರು. ಜಿಲ್ಲಾ ಎಸ್ಪಿ ಕುಶಾಲ್ ಚೌಕ್ಸೆ, ಅಡಿಷನಲ್ ಎಸ್ಪಿ ರಝಾ ಇಮಾಮ್ ಖಾಸಿಂ ಸಹ ಸ್ಥಳಕ್ಕೆ ಬೇಟಿ ನೀಡಿದ್ದರು.














