ಬೇತುಲ್: ಇಂದು ಮುಂಜಾನೆ ಮಧ್ಯಪ್ರದೇಶದ ಬೇತುಲ್ ಜಿಲ್ಲೆಯಲ್ಲಿ ಬಸ್ಸು ಪಲ್ಟಿಯಾದ ಪರಿಣಾಮ 21 ಪೊಲೀಸರು ಮತ್ತು ಗೃಹ ರಕ್ಷಕ ದಳದ ಸಿಬ್ಬಂದಿ ಗಾಯಗೊಂಡಿದ್ದಾರೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.
ಗಾಯಗೊಂಡಿರುವ ಅಧಿಕಾರಿಗಳು ಚುನಾವಣಾ ಕರ್ತವ್ಯ ಮುಗಿಸಿ ರಾಜ್ ಗಢಕ್ಕೆ ಹಿಂತಿರುಗುತ್ತಿದ್ದಾಗ ಭೋಪಾಲ್-ಬೇತುಲ್ ಹೆದ್ದಾರಿಯ ಬರೇತಾ ಘಾಟ್ ಬಳಿ ಮುಂಜಾನೆ 4 ಗಂಟೆ ಈ ಅಪಘಾತ ನಡೆದಿದೆ ಎಂದು ಪೊಲೀಸ್ ಉಪ ವಿಭಾಗಾಧಿಕಾರಿ (SDOP) ಶಾಲಿನಿ ಪರಸ್ತೆ ತಿಳಿಸಿದ್ದಾರೆ.
ಐವರು ಪೊಲೀಸರು ಮತ್ತು ಉಳಿದ ಗೃಹರಕ್ಷಕರು (ಹೋಮ್ ಗಾರ್ಡ್) ಸೇರಿದಂತೆ ಒಟ್ಟು 40 ಜನ ಗಾಯಗೊಂಡಿದ್ದಾರೆ.
ಈ ಬಸ್ ಛಿಂದ್ವಾ ಕ್ಷೇತ್ರದಿಂದ ಚುನಾವಣಾ ಕರ್ತವ್ಯ ಮುಗಿಸಿ ರಾಜ್‌ಗಢಕ್ಕೆ ಬರುತ್ತಿದ್ದಾಗ ಎದುರಿನಿಂದ ಬಂದ ಟ್ರಕ್ ತಪ್ಪಿಸಲು ಹೋಗಿ ಬಸ್ ಪಲ್ಟಿಯಾಗಿದೆ ಎಂದು ಹೇಳಲಾಗಿದೆ. ಗಂಭೀರವಾಗಿ ಗಾಯಗೊಂಡಿರುವ ಎಂಟು ಸಿಬ್ಬಂದಿಗೆ ಬೆತುಲ್‌ನ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು ಸಣ್ಣಪುಟ್ಟ ಗಾಯಗೊಂಡವರಿಗೆ ಶಾಹಪುರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.