ಚಿಕ್ಕಬಳ್ಳಾಪುರ: ಮರಕ್ಕೆ ಡಿಕ್ಕಿ ಹೊಡೆದು ಬಸ್ ಪಲ್ಟಿಯಾಗಿ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ತಾಲೂಕಿನ ಪಾತಪಾಳ್ಯ ಗ್ರಾಮದ ಬಳಿ ನಡೆದಿದೆ.
ಮೃತರಲ್ಲಿ ಓರ್ವ ರೇಚನಾಯ್ಕನಹಳ್ಳಿ ವೆಂಕಟರಾಪ್ಪ(60) ಎಂದು ತಿಳಿದು ಬಂದಿದ್ದು, ಮತ್ತೋರ್ವನ ಹೆಸರು ತಿಳಿದು ಬಂದಿಲ್ಲ.
ಇನ್ನುಳಿದಂತೆ ಬಸ್ನಲ್ಲಿದ್ದ 30ಕ್ಕೂ ಹೆಚ್ಚು ಪ್ರಯಾಣಿಕರಿಗೆ ಗಂಭೀರ ಗಾಯವಾಗಿದ್ದು, ಅವರನ್ನು ಕೂಡಲೇ ಬಾಗೇಪಲ್ಲಿ ಸರ್ಕಾರಿ ಆಸ್ಪತ್ರೆಗೆ ರವಾನೆ ಮಾಡಲಾಗಿದೆ.
ಈ ಘಟನೆ ಪಾತಪಾಳ್ಯ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಅತಿ ವೇವಾಗಿ ಬಸ್ ಚಲಿಸಿ ಮರಕ್ಕೆ ಡಿಕ್ಕಿ ಹೊಡೆದಿದೆ. ಬಸ್ ಡಿಕ್ಕಿ ಹೊಡೆದ ರಭಸಕ್ಕೆ ಮರವೇ ಉರುಳಿ ಬಿದ್ದಿದೆ.
ಇನ್ನು ಖಾಸಗಿ ಬಸ್ ಪಲ್ಟಿ ಪ್ರಕರಣಕ್ಕೆ ಸಂಬಂಧಿಸಿದಂತೆ ಆರ್ ಟಿಓ ಹಾಗೂ ಪೊಲೀಸರ ವಿರುದ್ಧ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದು, ರಸ್ತೆ ಸಾರಿಗೆ ಸಂಚಾರ ನಿಯಮ ಉಲ್ಲಂಘಿಸಿ ಬಸ್ ಗಳನ್ನು ಚಲಾಯಿಸುತ್ತಿದ್ದಾರೆ. ಆರ್ ಟಿಓ ಹಾಗೂ ಪೊಲೀಸರು ಕಣ್ಣಿದ್ದು ಕುರುಡರಾಗಿದ್ದಾರೆ. ಖಾಸಗಿ ಬಸ್ ಗಳ ಆಟಾಟೋಪಕ್ಕೆ ಕಡಿವಾಣ ಹಾಕುವವರೇ ಇಲ್ಲದಂತಾಗಿದೆ ಎಂದು ಕಿಡಿಕಾರಿದ್ದಾರೆ.