ಚಾಮರಾಜನಗರ: ಚಾಲಕನ ನಿಯಂತ್ರಣ ತಪ್ಪಿದ ಖಾಸಗಿ ಬಸ್ ಉರುಳಿ ಬಿದ್ದು ಕ್ಲೀನರ್ ಸ್ಥಳದಲ್ಲೇ ಸಾವನ್ನಪ್ಪಿ, 30ಕ್ಕೂ ಹೆಚ್ಚು ಜನರು ಗಾಯಗೊಂಡ ಘಟನೆ ಹನೂರು ತಾಲೂಕಿನ ಬಂಡಳ್ಳಿ ಹೊರ ವಲಯದ ತೆಳ್ಳನೂರು ರಸ್ತೆಯಲ್ಲಿ ಕಳೆದ ರಾತ್ರಿ ನಡೆಯಿತು.
ಕೊಳ್ಳೇಗಾಲ ತಾಲೂಕಿನ ದೊಡ್ಡಿಂದುವಾಡಿ ಗ್ರಾಮದ ನವೀನ್(38) ಮೃತಪಟ್ಟಿದ್ದಾರೆ.
ಶಾಗ್ಯ ಗ್ರಾಮದ ಜನರು ನಿಶ್ಚಿತಾರ್ಥ ಕಾರ್ಯಕ್ರಮದ ಅಂಗವಾಗಿ ಖಾಸಗಿ ಬಸ್ನಲ್ಲಿ ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಹಳ್ಳಿಯೊಂದಕ್ಕೆ ತೆರಳಿದ್ದರು. ಕಾರ್ಯಕ್ರಮ ಮುಗಿಸಿ ಶಾಗ್ಯ ಗ್ರಾಮಕ್ಕೆ ಹಿಂತಿರುಗುತ್ತಿದ್ದಾಗ ಬಂಡಳ್ಳಿ ತೆಳ್ಳನೂರು ಮಾರ್ಗದ ಕಾಯಿ ಒಡೆಯುವ ಕಲ್ಲಿನ ರಸ್ತೆ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿದ ಬಸ್ ಪಲ್ಟಿಯಾಗಿದೆ. ಬಸ್ ಕ್ಲೀನರ್ ಬಸ್ಸಿನ ನವೀನ್ ಚಕ್ರಕ್ಕೆ ಸಿಲುಕಿ ಸ್ಥಳದಲ್ಲಿ ಮೃತಪಟ್ಟಿದ್ದಾರೆ. ಬಸ್ಸಿನಲ್ಲಿದ್ದ ಸುಮಾರು 30ಕ್ಕೂ ಹೆಚ್ಚು ಜನರಿಗೆ ಸಣ್ಣಪುಟ್ಟ ಗಾಯಗಳಾಗಿದೆ.
ಮಾಹಿತಿ ಅರಿತ ಸಮೀಪದ ಗ್ರಾಮಸ್ಥರು ಆಗಮಿಸಿ, ಬಸ್ಸಿನಲ್ಲಿದ್ದ ಜನರನ್ನು ಖಾಸಗಿ ವಾಹನಗಳ ಮೂಲಕ ಹನೂರು, ಕಾಮಗೆರೆ, ಕೊಳ್ಳೇಗಾಲ ಆಸ್ಪತ್ರೆಗಳಿಗೆ ರವಾನಿಸಿದರು. ಬಳಿಕ ಸ್ಥಳಕ್ಕಾಗಮಿಸಿದ ಹನೂರು ಹಾಗೂ ಕೊಳ್ಳೇಗಾಲ ಪೊಲೀಸರು, ಮೃತದೇಹವನ್ನು ಜೆಸಿಬಿ ಮುಖಾಂತರ ಹೊರತೆಗೆದು ಮುಂದಿನ ಕ್ರಮ ಕೈಗೊಂಡಿದ್ದಾರೆ.