ಪಣಜಿ: ಚಾಲಕನ ನಿಯಂತ್ರಣ ತಪ್ಪಿದ ಬಸ್ಸೊಂದು ರಸ್ತೆ ಬದಿಯ ಗುಡಿಸಲಿಗೆ ನುಗ್ಗಿದ ಪರಿಣಾಮ ಗುಡಿಸಲಿನೊಳಗೆ ಮಲಗಿದ್ದ ನಾಲ್ವರು ಕಾರ್ಮಿಕರು ಮೃತಪಟ್ಟು ಐವರು ಗಂಭೀರ ಗಾಯಗೊಂಡಿರುವ ಘಟನೆ ವೆರ್ನಾ ಇಂಡಸ್ಟ್ರಿಯಲ್ ಎಸ್ಟೇಟ್ ನಲ್ಲಿ ತಡರಾತ್ರಿ ಸಂಭವಿಸಿದೆ.
ಮೃತ ಕಾರ್ಮಿಕರನ್ನು ಬಿಹಾರ ಮೂಲದವರೆಂದು ಹೇಳಲಾಗಿದೆ.
ಸಿಕ್ಕಿರುವ ಮಾಹಿತಿಯ ಪ್ರಕಾರ, ವೆರ್ನಾ ಇಂಡಸ್ಟ್ರಿಯಲ್ ಎಸ್ಟೇಟ್ ನಲ್ಲಿ ಶನಿವಾರ ತಡರಾತ್ರಿ ಹನ್ನೊಂದು ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ. ರೋಸ್ ಬರ್ಗರ್ ಕಂಪನಿಯ ಉದ್ಯೋಗಿಗಳನ್ನು ಐಡಿಸಿಯಲ್ಲಿ ಡ್ರಾಪ್ ಮಾಡಲು ಬಾಡಿಗೆಗೆ ಪಡೆದ ಖಾಸಗಿ ಬಸ್ ಚಾಲಕ ಮದ್ಯದ ಅಮಲಿನಲ್ಲಿದ್ದ ಕಾರಣ ತಿರುವನ್ನು ಗಮನಿಸದೆ ನೇರವಾಗಿ ಚಲಿಸಿದ ಪರಿಣಾಮ ಕಾರ್ಮಿಕರು ಉಳಿದುಕೊಳ್ಳಲು ಹಾಕಿದ್ದ ಶೆಡ್ ಗೆ ಬಸ್ ನುಗ್ಗಿದೆ, ಈ ವೇಳೆ ಶೆಡ್ ಒಳಗೆ ಮಲಗಿದ್ದ ಸುಮಾರು ಒಂಬತ್ತು ಮಂದಿಯಾ ಮೇಲೆ ಬಸ್ಸು ಹರಿಸಿದೆ ಪರಿಣಾಮ ಮೂವರು ಸ್ಥಳದಲ್ಲೇ ಮೃತಪಟ್ಟರೆ ಓರ್ವ ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಮೃತಪಟ್ಟಿದ್ದಾನೆ ಎನ್ನಲಾಗಿದೆ. ಐದೇ ವೇಳೆ ಘಟನೆಯಲ್ಲಿ ಐವರು ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.
ಅಪಘಾತದ ಗಾಯಾಳುಗಳನ್ನು ದಕ್ಷಿಣ ಗೋವಾ ಜಿಲ್ಲಾ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲುಮಾಡಲಾಗಿದ್ದು, ಮೃತ ದೇಹಗಳನ್ನು ದಕ್ಷಿಣ ಗೋವಾ ಜಿಲ್ಲಾ ಆಸ್ಪತ್ರೆಯ ಶವಾಗಾರದಲ್ಲಿ ಇರಿಸಲಾಗಿದೆ. ಈ ಅಪಘಾತದಲ್ಲಿ ಕಂಪನಿಯ ಕೆಲವು ಉದ್ಯೋಗಿಗಳು ಮತ್ತು ಬಸ್ ಚಾಲಕನಿಗೆ ಸಣ್ಣಪುಟ್ಟ ಗಾಯಗಳಾಗಿವೆ ಎನ್ನಲಾಗಿದೆ.
ಅಪಘಾತದಿಂದ ಬದುಕುಳಿದ ಕಾರ್ಮಿಕರ ಮಾಹಿತಿ ಪ್ರಕಾರ, ಬಸ್ ಡಿಕ್ಕಿ ಹೊಡೆದು ಮೂರೂ ಗುಡಿಸಲುಗಳು ಧ್ವಂಸವಾಗಿವೆ ಎನ್ನಲಾಗಿದೆ. ಹೆದ್ದಾರಿಯ ಚರಂಡಿಗೆ ಸ್ಲ್ಯಾಬ್ ಹಾಕುವ ಕೆಲಸವನ್ನು ಕಾರ್ಮಿಕರು ಮಾಡುತ್ತಿದ್ದು, ಗುತ್ತಿಗೆದಾರರಿಂದ ತಾತ್ಕಾಲಿಕ ಶೆಡ್ ಗಳನ್ನು ನಿರ್ಮಿಸಿ ಅಲ್ಲಿ ವಾಸವಾಗಿದ್ದರು ಎನ್ನಲಾಗಿದೆ.
ಅಪಘಾತ ಮಾಡಿದ ಬಸ್ ಚಾಲಕ ಪಾನಮತ್ತನಾಗಿದ್ದ ಎನ್ನಲಾಗಿದ್ದು ಅಪಘಾತ ನಡೆದ ಬಳಿಕವೂ ಮದ್ಯಪಾನ ಮಾಡುವುದನ್ನು ಮುಂದುವರೆಸಿದ್ದಾನೆ ಈ ಕುರಿತು ಯಾರಿಗಾದರೂ ತಿಳಿಸಿದರೆ ಕಾರ್ಮಿಕರನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿದ್ದಾನೆ ಎಂದು ಕಾರ್ಮಿಕರು ಹೇಳಿದ್ದಾರೆ.
ಸದ್ಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.