ಬೆಂಗಳೂರು : ಗುಂಡಿ ವಿಚಾರದಲ್ಲಿ ಸರ್ಕಾರವನ್ನು ಟೀಕಿಸಿದ್ದ ಉದ್ಯಮಿ ಮೋಹನ್ದಾಸ್ ಪೈ ಈಗ ರಾಜ್ಯದಲ್ಲಿರುವ ಸಾರ್ವಜನಿಕ ಸಾರಿಗೆ ವ್ಯವಸ್ಥೆಯನ್ನು ಟೀಕಿಸಿ ಸಚಿವ ರಾಮಲಿಂಗಾ ರೆಡ್ಡಿ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸಾರಿಗೆ ಸಚಿವರಾಗಿ ನಿಮ್ಮ ಸಿದ್ಧಾಂತ, ನಡೆಯಿಂದ ಉತ್ತಮ ಸಾರಿಗೆ ವ್ಯವಸ್ಥೆ ನೀಡುವಲ್ಲಿ ವಿಫಲರಾಗಿದ್ದೀರಿ. ಖಾಸಗಿ ವಲಯಕ್ಕೆ ಅವಕಾಶ ನೀಡಿ ಎಂದು ಕುಟುಕಿದ್ದಾರೆ. ಕಳೆದ ಮೂರು ವರ್ಷಗಳಿಂದ ಸಾರಿಗೆ ಸರಿಯಿಲ್ಲ. ಬಸ್ಸುಗಳ ಸಂಖ್ಯೆ ಕಡಿಮೆಯಿದೆ ಎಂದು ಪೋಸ್ಟ್ ಮಾಡಿದ್ದಾರೆ.
ಈ ಪೋಸ್ಟ್ಗೆ ಪ್ರತಿಕ್ರಿಯಿಸಿದ ರಾಮಲಿಂಗಾರೆಡ್ಡಿ, ಯಾವುದೇ ವೇದಿಕೆಯಲ್ಲಿ ನಿಮ್ಮೊಂದಿಗೆ ಮುಖಾಮುಖಿ ಚರ್ಚೆಗೆ ಸಿದ್ದ. ನಿಮ್ಮ ಜೊತೆಗೆ ಚರ್ಚೆ ಮಾಡಲು ನಮ್ಮ ಬಿಎಂಟಿಸಿ ಎಂಡಿ ಸಾಕು. ದಯಮಾಡಿ ಬಂದು ವಾಸ್ತವಾಂಶಗಳನ್ನು ನೇರವಾಗಿ ಅವರೊಂದಿಗೆ ಚರ್ಚಿಸಿ ನೀವು ಚರ್ಚೆಗೆ ಬರುತ್ತೀರಾ? ಇಲ್ಲ ಟ್ವೀಟ್ ಮಾಡುತ್ತಲೇ ಇರುತ್ತೀರಾ ಎಂದು ಪ್ರಶ್ನಿಸಿ ತಿರುಗೇಟು ನೀಡಿದ್ದಾರೆ.
ನಿಮ್ಮ ದೃಷ್ಟಿಕೋನವು ಕೇವಲ ಪಕ್ಷಪಾತವಲ್ಲ. ಇದು ಮೂಲಭೂತವಾಗಿ ಸಿದ್ಧಾಂತವಾಗಿದೆ. ನೀವು ಸಾರ್ವಜನಿಕ ಸೇವೆಯನ್ನು ಬ್ಯಾಲೆನ್ಸ್ ಶೀಟ್ ಆಧಾರದಲ್ಲಿ ನೋಡುತ್ತೀರಿ. ನಾವು ಸಾರ್ವಜನಿಕ ಸಾರಿಗೆ ಸೇವೆಯಾಗಿ ನೋಡುತ್ತೇವೆ. ಶಕ್ತಿ ಯೋಜನೆ ಮೂಲಕ ಕ್ರಾಂತಿ ಮಾಡಿದ್ದೇವೆ ಎಂದು ಪ್ರತಿಕ್ರಿಯಿಸಿದ್ದಾರೆ. ನಾವು ಮಹಿಳೆಯರಿಗೆ 650 ಕೋಟಿ ಉಚಿತ ಟಿಕೆಟ್ ನೀಡಿದ್ದೇವೆ. ಶಕ್ತಿ ಯೋಜನೆ ಕೇವಲ ʼಯೋಜನೆʼ ಅಲ್ಲ. ಇದು ಭಾರತದ ಇತಿಹಾಸದಲ್ಲಿ ಅತ್ಯಂತ ದೊಡ್ಡ ಆರ್ಥಿಕ ಸಬಲೀಕರಣ. ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡುವ ಬದಲು ನೀವು ನೇರ ಚರ್ಚೆಗೆ ಬನ್ನಿ ಎಂದು ಸವಾಲು ಎಸೆದಿದ್ದಾರೆ.















