ಉದ್ಯಮಿಯೊಬ್ಬರನ್ನು ಅಪಹರಿಸಿ ಥಳಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಶಿವಸೇನಾ (ಶಿಂಧೆ ಬಣದ) ಶಾಸಕ ಪ್ರಕಾಶ್ ಸುರ್ವೆ ಅವರ ಪುತ್ರ ರಾಜ್ ಸುರ್ವೆ ವಿರುದ್ಧ ಎಫ್‌ಐಆರ್ ದಾಖಲಾಗಿದೆ.
ವಿಷಯ ಬಯಲಿಗೆ ಬಂದ ನಂತರ ರಾಜಕೀಯ ಪಡಸಾಲೆಯಲ್ಲಿ ಸಂಚಲನ ಮೂಡಿದೆ. ನಿನ್ನೆ ಗೋರೆಗಾಂವ್ ಪೂರ್ವ ಪ್ರದೇಶದಿಂದ ಉದ್ಯಮಿ ರಾಜ್ ಕುಮಾರ್ ಸಿಂಗ್ ಅವರನ್ನು ಅಪಹರಿಸಿದ್ದಕ್ಕಾಗಿ ರಾಜ್ ಸುರ್ವೆ ಸೇರಿದಂತೆ ಐವರು ಆರೋಪಿಗಳನ್ನು ಹೆಸರಿಸಿರುವುದಾಗಿ ಮುಂಬೈ ಪೊಲೀಸರು ತಿಳಿಸಿದ್ದಾರೆ.
ಇದೇ ವೇಳೆ 10-12 ಅಪರಿಚಿತರ ವಿರುದ್ಧವೂ ಪ್ರಕರಣ ದಾಖಲಾಗಿದೆ.
ಮುಂಬೈನ ಗೋರೆಗಾಂವ್ ನಲ್ಲಿರುವ ಗ್ಲೋಬಲ್ ಮ್ಯೂಸಿಕ್ ಜಂಕ್ಷನ್ ಕಚೇರಿಗೆ ಸುಮಾರು 10 ರಿಂದ 15 ಜನರು ಏಕಾಏಕಿ ತಲುಪಿ ಸಂಗೀತ ಕಂಪನಿಯ ಸಿಇಒ ರಾಜ್ ಕುಮಾರ್ ಸಿಂಗ್ ಅವರನ್ನು ಅಪಹರಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಸಿಸಿಟಿವಿ ಕ್ಯಾಮೆರಾದ ದೃಶ್ಯಾವಳಿಯಲ್ಲಿ ಇದು ಸೆರೆಯಾಗಿದೆ.
ಕೆಲವರು ಕಚೇರಿಗೆ ನುಗ್ಗಿ ತನ್ನನ್ನು ದಹಿಸರ್ ನಲ್ಲಿರುವ ಶಾಸಕ ಪ್ರಕಾಶ್ ಸುರ್ವೆ ಅವರ ಕಚೇರಿಗೆ ಕರೆದೊಯ್ದರು. ಶಾಸಕರ ಪುತ್ರ ರಾಜ್ ಸುರ್ವೆ ಮತ್ತಿತರರು ಇದ್ದರು, ಬಂದೂಕು ತೋರಿಸಿ ಪಾಟ್ನಾದ ಮನೋಜ್ ಮಿಶ್ರಾ ಅವರಿಗೆ ನೀಡಲಾದ ವ್ಯಾಪಾರ ಸಾಲವನ್ನು ಮರುಪಾವತಿಸುವಂತೆ ಒತ್ತಾಯಿಸಿದರು. ನಂತರ ಈ ಬಗ್ಗೆ ಯಾರೊಂದಿಗೂ ಮಾತನಾಡದಂತೆ ಬೆದರಿಕೆ ಹಾಕಿದರು ಎಂದು ರಾಜ್ ಕುಮಾರ್ ಸಿಂಗ್ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.