ಬೆಂಗಳೂರು : ನಿರ್ದೇಶಕ ನಂದಕಿಶೋರ್ ಅವರಿಗೆ ಸಾಲ ನೀಡಿದ್ದ ಉದ್ಯಮಿಯನ್ನು ಅಪಹರಣ ಮಾಡಿದ ಪ್ರಕರಣದಲ್ಲಿ ಯಶಸ್ವಿನಿ ಗೌಡಳನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಮಹಾಲಕ್ಷ್ಮಿ ಲೇಔಟ್ ಪೊಲೀಸ್ ಠಾಣಾ ವ್ಯಾಪ್ತಿಯ ಮೋದಿ ಆಸ್ಪತ್ರೆ ರಸ್ತೆಯಲ್ಲಿ ಸೆ.26ರಂದು ಸಂಜೆ 6: 30ರ ಸುಮಾರಿಗೆ ರಿಯಲ್ ಎಸ್ಟೇಟ್ ವ್ಯವಹಾರ ನಡೆಸುತ್ತಿದ್ದ ಮನೋಜ್ ಅವರನ್ನು ರೌಡಿಗಳ ಗುಂಪು ಅಪಹರಿಸಿತ್ತು.
ಈ ಪ್ರಕರಣದಲ್ಲಿ ಬೇಕರಿ ರಘು, ರಾಜೇಶ್, ವೆಂಕಟೇಶ್ ಸೇರಿದಂತೆ ಹಲವರನ್ನು ಬಂಧನ ಮಾಡಲಾಗಿತ್ತು. ಮಂಡ್ಯದಲ್ಲಿ ಬೇಕರಿ ರಘು ಅರೆಸ್ಟ್ ಮಾಡುವ ವೇಳೆ ಪೊಲೀಸರಿಗೆ ಯಶಸ್ವಿನಿ ಅಡ್ಡಿಪಡಿಸಿದ್ದಳು. ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಕ್ಕೆ ಎಫ್‌ಐಆರ್ ದಾಖಲಾಗಿತ್ತು. ಈ ಪ್ರಕರಣದಲ್ಲಿ ಬಸವನಗುಡಿ ಪೊಲೀಸ್ ಠಾಣೆಯ ಮಾಜಿ ರೌಡಿಶೀಟರ್ ಯಶಸ್ವಿನಿ ಪಾತ್ರವಿರುವುದು ಕಂಡಬಂದಿತ್ತು. ಪುಟ್ಟೇನಹಳ್ಳಿಯಲ್ಲಿ ತಲೆಮರೆಸಿಕೊಂಡಿದ್ದ ಯಶಸ್ವಿನಿಯನ್ನು ಕೋಕಾ ಕಾಯ್ದೆಯಡಿ ಪೊಲೀಸರು ಬಂಧಿಸಿ ಜೈಲಿಗಟ್ಟಿದ್ದಾರೆ.
ಏನಿದು ಕೋಕಾ ಕಾಯ್ದೆ? – ಕರ್ನಾಟಕ ಸಂಘಟಿತ ಅಪರಾಧಗಳ ನಿಯಂತ್ರಣ ಕಾಯ್ದೆ, ಇದು ಸಂಘಟಿತ ಅಪರಾಧಗಳು, ಮಾಫಿಯಾ ಮತ್ತು ಭಯೋತ್ಪಾದಕ ಚಟುವಟಿಕೆಗಳನ್ನು ತಡೆಯಲು ಜಾರಿಗೆ ತಂದ ಕಠಿಣ ಕಾನೂನಾಗಿದೆ. ಆರೋಪಿಗಳಿಗೆ ಕಠಿಣ ಶಿಕ್ಷೆ, ಜಾಮೀನು ರಹಿತ ಬಂಧನ ಮತ್ತು ಆಸ್ತಿ ಮುಟ್ಟುಗೋಲಿಗೆ ಅವಕಾಶ ನೀಡುತ್ತದೆ.
ಈ ಕಾಯ್ದೆಯ ಅಡಿಯಲ್ಲಿ, ಸಂಘಟಿತ ಅಪರಾಧಗಳಲ್ಲಿ ಭಾಗವಹಿಸುವವರಿಗೆ ಗರಿಷ್ಠ ಗಲ್ಲು ಶಿಕ್ಷೆ ಅಥವಾ ಜೀವಾವಧಿ ಜೈಲು ಶಿಕ್ಷೆ ವಿಧಿಸಬಹುದು. ಜೊತೆಗೆ 1 ಲಕ್ಷ ರೂ.ಗೆ ಕಡಿಮೆ ಇಲ್ಲದಂತೆ 5 ಲಕ್ಷ ರೂ.ವರೆಗೂ ದಂಡ ವಿಧಿಸಲು ಈ ಕಾಯ್ದೆಯ ಅಡಿ ಅವಕಾಶವಿದೆ. ಆರೋಪಿಗಳಿಗೆ ಕನಿಷ್ಠ 5 ವರ್ಷ ಜೈಲು ಶಿಕ್ಷೆ ವಿಧಿಸಬಹುದಾಗಿದೆ.ಆರೋಪ ಪಟ್ಟಿ ಸಲ್ಲಿಸಲು 365 ದಿನಗಳವರೆಗೆ ಸಮಯಾವಕಾಶ ಇರುತ್ತದೆ.
ಗೌರಿ ಹತ್ಯೆ ಪ್ರಕರಣವನ್ನು ನಡೆಸಿದ್ದ ವಿಶೇಷ ತನಿಖಾ ತಂಡ ಆರೋಪಿಗಳ ಮೇಲೆ ಕೋಕಾ ಕಾಯ್ದೆಯನ್ನು ಪ್ರಯೋಗಿಸಿದೆ. ಈ ಹಿಂದೆ ಪಿಯುಸಿ ಪ್ರಶ್ನೆ ಪತ್ರಿಕೆಗಳು ಸೋರಿಕೆಯಾದ ಹಿನ್ನೆಲೆಯಲ್ಲಿ 2019ರ ಪರೀಕ್ಷೆಯ ವೇಳೆ ಯಾರಾದರೂ ಪ್ರಶ್ನೆ ಪತ್ರಿಕೆಯನ್ನು ಸೋರಿಕೆ ಮಾಡಿದ್ದಲ್ಲಿ ಅವರ ವಿರುದ್ಧ ಕೋಕಾ ಕಾಯ್ದೆಯನ್ನು ಹಾಕಲಾಗುತ್ತದೆ.















