ಮನೆ ರಾಜಕೀಯ ಉಪ ಚುನಾವಣಾ ಫಲಿತಾಂಶ: ಸಂಡೂರು, ಚನ್ನಪಟ್ಟಣ, ಶಿಗ್ಗಾಂವಿ ಕ್ಷೇತ್ರಗಳ ಮತ ಎಣಿಕೆ ಆರಂಭ

ಉಪ ಚುನಾವಣಾ ಫಲಿತಾಂಶ: ಸಂಡೂರು, ಚನ್ನಪಟ್ಟಣ, ಶಿಗ್ಗಾಂವಿ ಕ್ಷೇತ್ರಗಳ ಮತ ಎಣಿಕೆ ಆರಂಭ

0

ಬೆಂಗಳೂರು: ಸಂಡೂರು, ಚನ್ನಪಟ್ಟಣ ಹಾಗೂ ಶಿಗ್ಗಾವಿ ಕರ್ನಾಟಕ ರಾಜ್ಯದ ಮೂರೂ ಕ್ಷೇತ್ರಗಳ ಉಪ ಚುನಾವಣೆಯ ಮತ ಎಣಿಕೆ ಕಾರ್ಯ ಶನಿವಾರ(ನ.23) ಬೆಳಿಗ್ಗೆ ಆರಂಭಗೊಂಡಿದೆ.

Join Our Whatsapp Group

ಬೆಳಿಗ್ಗೆ ಏಳು ಗಂಟೆಗೆ ಚುನಾವಣಾ ಸಿಬಂದಿಗಳು ರಾಜಕೀಯ ನಾಯಕರು ಹಾಗೂ ಪೊಲೀಸ್ ಅಧಿಕಾರಿಗಳ ಸಮ್ಮುಖದಲ್ಲಿ ಮತ ಎಣಿಕಾ ಕೇಂದ್ರದ ಸ್ಟ್ರಾಂಗ್ ರೂಮ್ ತೆರೆದು ಮತ ಎಣಿಕೆ ಕಾರ್ಯಕ್ಕೆ ಅನುವು ಮಾಡಿ ಕೊಟ್ಟಿದ್ದು ಅದರಂತೆ ಮೂರೂ ಕ್ಷೇತ್ರಗಳ ಅಭ್ಯರ್ಥಿಗಳ ಭವಿಷ್ಯ ಇಂದು ನಿರ್ಧಾರವಾಗಲಿದೆ.

ಚನ್ನಪಟ್ಟಣದಿಂದ ಎನ್​ಡಿಎ ಮೈತ್ರಿಕೂಟದಿಂದ ನಿಖಿಲ್​ ಕುಮಾರಸ್ವಾಮಿ ಮತ್ತು ಕಾಂಗ್ರೆಸ್​ನಿಂದ ಸಿಪಿ ಯೋಗೇಶ್ವರ್​ ಕಣದಲ್ಲಿದ್ದಾರೆ. ಶಿಗ್ಗಾಂವಿಯಿಂದ ಎನ್​ಡಿಎ ಮೈತ್ರಿಕೂಟದಿಂದ ಭರತ ಬೊಮ್ಮಾಯಿ ಕಾಂಗ್ರೆಸ್​ ನಿಂದ ಯಾಸಿರ್ ಅಹಮದ್​ ಖಾನ್​ ಪಠಾಣ್​ ಅವರು ಕಣದಲ್ಲಿದ್ದಾರೆ. ಹಾಗೆಯೇ ಸಂಡೂರಿನಲ್ಲಿ ಎನ್​ಡಿಎ ಮೈತ್ರಿಕೂಟದಿಂದ ಬಂಗಾರು ಹನುಮಂತು ಮತ್ತು ಕಾಂಗ್ರೆಸ್​ನಿಂದ ಅನ್ನಪೂರ್ಣ ತುಕಾರಾಂ ಕಣದಲ್ಲಿದ್ದಾರೆ. ಮತ ಎಣಿಕೆ ಕೇಂದ್ರದ ಸುತ್ತ ಪೊಲೀಸ್ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿದ್ದು ಎಲ್ಲರ ಚಿತ್ತ ಚುನಾವಣಾ ಫಲಿತಾಂಶದ ಮೇಲಿದೆ.

ಶಿಗ್ಗಾವಿ ಕ್ಷೇತ್ರ:

ಹಾವೇರಿ: ತೀವ್ರ ಕುತೂಹಲ ಕೆರಳಿಸಿರುವ ಶಿಗ್ಗಾವಿ ಉಪ ಚುನಾವಣೆಯ ಮತ ಎಣಿಕೆ ದೇವಗಿರಿಯ ಸರ್ಕಾರಿ ಎಂಜನಿಯರಿಂಗ್ ಕಾಲೇಜಿನಲ್ಲಿ ಬೆಳಗ್ಗೆ 8 ಗಂಟೆಗೆ ಆರಂಭವಾಯಿತು.

ಮತಪೆಟ್ಟಿಗೆಗಳನ್ನು ಇಟ್ಟಿದ್ದ ಸ್ಟ್ರಾಂಗ್ ರೂಮ್ ಅನ್ನು ಜಿಲ್ಲಾ ಚುನಾವಣಾಧಿಕಾರಿ, ಜಿಲ್ಲಾಧಿಕಾರಿ ಡಾ.ವಿಜಯಮಹಾಂತೇಶ ದಾನಮ್ಮನವರ, ಚುನಾವಣಾಧಿಕಾರಿ ಮಹಮ್ಮದ್ ಖೀಜರ್, ಪೊಲೀಸ್ ವರಿಷ್ಠಾಧಿಕಾರಿ ಅಂಶಕುಮಾರ ಹಾಗೂ ಅಭ್ಯರ್ಥಿಗಳ ಏಜೆಂಟರ ಸಮ್ಮುಖದಲ್ಲಿ ತೆರೆಯಲಾಯಿತು. ಒಟ್ಟು 14 ಸುತ್ತುಗಳಲ್ಲಿ ಮತ ಎಣಿಕೆ ನಡೆಯಲಿದ್ದು, ಮಧ್ಯಾಹ್ನದ ವೇಳೆ ಫಲಿತಾಂಶದ ಚಿತ್ರಣ ಹೊರಬಿಳಲಿದೆ.

ಇವಿಎಂ ಮತಗಳ ಎಣಿಕೆ ಕಾರ್ಯಕ್ಕೆ 14 ಟೇಬಲ್, ಅಂಚೆ ಮತಪತ್ರ ಎಣಿಕೆಗೆ 1 ಟೇಬಲ್ ಹಾಗೂ ಸೇವಾ ಮತದಾರರ ಅಂಚೆ ಮತಪತ್ರ ಎಣಿಕೆಗಾಗಿ 1 ಟೇಬಲ್ ಸಿದ್ದಪಡಿಸಲಾಗಿದೆ. ಪ್ರತಿ ಟೆಬಲ್ ಗೆ ಒಬ್ಬರು ಎಣಿಕೆ ಮೇಲ್ವಿಚಾರಕರು, ಒಬ್ಬರು ಎಣಿಕೆ ಸಹಾಯಕರು ಹಾಗೂ ಒಬ್ಬರು ಎಣಿಕೆ ಮೈಕ್ರೋ ಅಬ್ಬರವರ್ ನೇಮಕ ಮಾಡಲಾಗಿದೆ. 8 ಅಭ್ಯರ್ಥಿಗಳು ಚುನಾವಣಾ ಕಣದಲ್ಲಿದ್ದು ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ.

ಬಿಗಿ ಬಂದೋಬಸ್ತ್..

ಎಣಿಕೆ ಕೇಂದ್ರದ ಬಂದೋಬಸ್ತ್ ಗೆ ಪೊಲೀಸ್ ಇಲಾಖೆಯಿಂದ ನಾಲ್ಕು ಡಿಎಸ್‌ಪಿ, ಒಂಭತ್ತು ಸಿಪಿಐ, 25 ಪಿಎಸ್ಐ, 29- ಎಎಸ್ಐ, 250 ಎಚ್.ಸಿ/ಪಿಸಿ ಹಾಗೂ  ಕೆಎಸ್‌ಆರ್‌ಪಿಯ ಎರಡು ತುಕಡಿಗಳನ್ನು ಮತ್ತು ನಾಲ್ಕು ಡಿ.ಆರ್. ತುಕಡಿಗಳು ಭದ್ರತೆಗಾಗಿ ನಿಯೋಜಿಸಲಾಗಿದೆ. ಮತ ಎಣಿಕೆ ಕೇಂದ್ರ 200 ಮೀ. ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಮಾಡಲಾಗಿದೆ.

ಸಂಡೂರು ಕ್ಷೇತ್ರ:

ಬಳ್ಳಾರಿ: ಸಂಡೂರು ಉಪಚುನಾವಣೆ ಮತ ಎಣಿಕೆ ಕಾರ್ಯ ಆರಂಭ. ನಗರದ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಮತಗಳ ಎಣಿಕೆ. ರಾಜಕೀಯ ಪಕ್ಷಗಳ ಮುಖಂಡರ ಸಮ್ಮುಖದಲ್ಲಿ ಜಿಲ್ಲಾ ಚುನಾವಣಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ ಅವರು ಬೆಳಗ್ಗೆ 7.30ಕ್ಕೆ ಮತಯಂತ್ರಗಳುಳ್ಳ ಸ್ಟ್ರಾಂಗ್ ರೂಮ್ ತೆರೆಯಲಾಯಿತು. ಮೊದಲ ಅಂಚೆ ಮತಗಳ ಎಣಿಕೆಯಲ್ಲಿ ಕಾಂಗ್ರೆಸ್ ಮುನ್ನಡೆ ಸಾಧಿಸಿದ್ದು, ಚಲಾವಣೆಯಾಗಿರುವ ಒಟ್ಟು 13 ಅಂಚೆ ಮತಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿ ಅನ್ನಪೂರ್ಣ ಅವರು ಬಿಜೆಪಿ ಅಭ್ಯರ್ಥಿ ಬಂಗಾರು ಹನುಮಂತು ಅವರಿಗಿಂತ ಮೂರು ಮತಗಳ ಮುನ್ನಡರ ಸಾಧಿಸಿದ್ದಾರೆ.