ಬೆಂಗಳೂರು : ಉದ್ಯಮಿ ಸಿ.ಜೆ ರಾಯ್ ಆತ್ಮಹತ್ಯೆ ಪ್ರಕರಣದ ತನಿಖೆ ಅಂತಿಮ ಹಂತ ತಲುಪಿದ್ದು, ವಿಶೇಷ ತನಿಖಾ ತಂಡ ತನಿಖೆಯನ್ನು ಪೂರ್ಣಗೊಳಿಸಿ ಶೀಘ್ರದಲ್ಲೇ ಪೊಲೀಸ್ ಕಮಿಷನರ್‌ಗೆ ವರದಿ ಸಲ್ಲಿಸಲಿದೆ.
ಸಿ.ಜೆ ರಾಯ್ ಆತ್ಮಹತ್ಯೆಯ ಹಿಂದಿನ ಸತ್ಯ ಎಸ್‌ಐಟಿ ವರದಿಯಿಂದ ಬಯಲಾಗುವ ಸಾಧ್ಯತೆ ಇದೆ. ಎಸ್‌ಐಟಿ ನಾಲ್ಕು ಪ್ರಮುಖ ಆಯಾಮಗಳಲ್ಲಿ ತನಿಖೆ ಕೈಗೊಂಡಿತ್ತು. ಐಟಿ ದಾಳಿ, ಉದ್ಯಮ ವ್ಯವಹಾರಗಳು, ವ್ಯವಹಾರದಲ್ಲಿನ ಹೂಡಿಕೆಗಳು ಹಾಗೂ ಕೌಟುಂಬಿಕ ವಿಚಾರಗಳಲ್ಲಿ ತನಿಖೆ ಕೈಗೊಳ್ಳಲಾಗಿತ್ತು.
ಈ ಸಂಬಂಧ ಹಲವು ದಾಖಲೆಗಳು ಮತ್ತು ಕಡತಗಳನ್ನು ಎಸ್‌ಐಟಿ ಪರಿಶೀಲಿಸಿದೆ. ಅಲ್ಲದೇ ಕಚೇರಿ ಸಿಬ್ಬಂದಿ, ಅಧಿಕಾರಿಗಳು, ಐಟಿ ಅಧಿಕಾರಿಗಳು ಮತ್ತು ರಾಯ್ ಕುಟುಂಬದ ಸದಸ್ಯರು ಹಾಗೂ ಆಪ್ತರು ಸೇರಿದಂತೆ ಹಲವರ ಹೇಳಿಕೆಗಳನ್ನು ದಾಖಲಿಸಿಕೊಂಡಿದೆ.
ರಾಯ್ ಅವರ ಆತ್ಮಹತ್ಯೆ ನಿರ್ಧಾರ ಕುಟುಂಬದ ಸದಸ್ಯರಿಗೂ ಅಚ್ಚರಿ ಮೂಡಿಸಿದೆ. ಉದ್ಯಮ ವ್ಯವಹಾರಗಳಲ್ಲಿ ಅತ್ಯಂತ ದಿಟ್ಟ ಮತ್ತು ಧೈರ್ಯಶಾಲಿ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದ್ದ ರಾಯ್, ಇಂತಹ ಕಠಿಣ ಹೆಜ್ಜೆ ಏಕೆ ಇಟ್ಟರು ಎಂಬುದು ಯಾರಿಗೂ ಗೊತ್ತಿಲ್ಲ.
ಅವರ ಆತ್ಮಹತ್ಯೆಯ ಹಿಂದಿನ ನಿಜವಾದ ಕಾರಣ ಇನ್ನೂ ನಿಗೂಢವಾಗಿಯೇ ಉಳಿದಿದೆ. ಅಂತಿಮ ಹಂತದ ತನಿಖೆ ನಡೆಸಿರುವ ಎಸ್‌ಐಟಿ ತಂಡ ಕೆಲವೇ ದಿನಗಳಲ್ಲಿ ತನ್ನ ಸಮಗ್ರ ವರದಿಯನ್ನು ಸಲ್ಲಿಸಲಿದೆ. ಈ ವರದಿಯ ಮೂಲಕವೇ ರಾಯ್ ಆತ್ಮಹತ್ಯೆಯ ಹಿಂದಿನ ನಿಗೂಢ ಸತ್ಯಾಂಶಗಳು ಹೊರಬೀಳುವ ನಿರೀಕ್ಷೆ ಇದೆ.














