ಮನೆ ರಾಜಕೀಯ ಸಿ.ಪಿ. ಯೋಗೇಶ್ವರ್ ವಿರುದ್ಧ ಸ್ವತಃ ಎಚ್.ಡಿ. ಕುಮಾರಸ್ವಾಮಿ ಸ್ಪರ್ಧಿಸಿದರೂ ಸೋಲು ಖಚಿತ: ಸಿದ್ದರಾಮಯ್ಯ

ಸಿ.ಪಿ. ಯೋಗೇಶ್ವರ್ ವಿರುದ್ಧ ಸ್ವತಃ ಎಚ್.ಡಿ. ಕುಮಾರಸ್ವಾಮಿ ಸ್ಪರ್ಧಿಸಿದರೂ ಸೋಲು ಖಚಿತ: ಸಿದ್ದರಾಮಯ್ಯ

0

ಚನ್ನಪಟ್ಟಣ (ರಾಮನಗರ): ನಮ್ಮ ಅಭ್ಯರ್ಥಿ ಸಿ.ಪಿ. ಯೋಗೇಶ್ವರ್ ವಿರುದ್ಧ ಸ್ವತಃ ಜೆಡಿಎಸ್ ನಾಯಕ ಎಚ್.ಡಿ. ಕುಮಾರಸ್ವಾಮಿ, ಅವರ ಪತ್ನಿ, ಪುತ್ರ ಸೇರಿದಂತೆ ಯಾರೇ ಸ್ಪರ್ಧಿಸಿದರೂ ಸೋಲು ಖಚಿತ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಪಟ್ಟಣದಲ್ಲಿ ಗುರುವಾರ ಕಾಂಗ್ರೆಸ್ ಅಭ್ಯರ್ಥಿಯಾಗಿ ಸಿ.ಪಿ. ಯೋಗೇಶ್ವರ್ ನಾಮಪತ್ರ ಸಲ್ಲಿಕೆಗೆ ಮುಂಚೆ ನಡೆದ ರೋಡ್ ಷೋನಲ್ಲಿ ಕಾರ್ಯಕರ್ತರನ್ನು ಉದ್ದೇಶಿಸಿ ಅವರು ಮಾತನಾಡಿದರು

ಕ್ಷೇತ್ರದಿಂದ ಎರಡು ಸಲ ಗೆದ್ದು ಒಮ್ಮೆ ಮುಖ್ಯಮಂತ್ರಿಯಾದರೂ ಕುಮಾರಸ್ವಾಮಿ ತಾಲ್ಲೂಕಿನಲ್ಲಿ ಯಾವುದೇ ಅಭಿವೃದ್ಧಿ ಮಾಡಲಿಲ್ಲ. ಈಗ ಎಲ್ಲಾ ಬಿಟ್ಟು ಮಂಡ್ಯ ಹಿಡಿದುಕೊಂಡಿದ್ದಾರೆ‌. ಈ  ಕ್ಷೇತ್ರದಲ್ಲಿ ಕೆರೆಗಳು ತುಂಬಿದ್ದರೆ ಅದಕ್ಕೆ ಯೋಗೇಶ್ವರ್ ಕಾರಣ.‌ ಅಭಿವೃದ್ಧಿ ಪರ ಕೆಲಸ ಮಾಡುವ ಇಂತಹ ನಮ್ಮ ಅಭ್ಯರ್ಥಿಯನ್ನು ಅತಿ ಹೆಚ್ಚು ಮತಗಳ ಅಂತರದಿಂದ ಗೆಲ್ಲಿಸಬೇಕು ಎಂದು ಕರೆ ನೀಡಿದರು.

ಐದು ಸಲ ಶಾಸಕರಾಗಿ, ಎರಡು ಸಲ ಸಚಿವರಾಗಿರುವ ಯೋಗೇಶ್ವರ್ ಮೂಲತಃ ಕಾಂಗ್ರೆಸ್ ನವರು. ನಮ್ಮ ಪಕ್ಷಕ್ಕೆ ವಾಪಸ್ ಬಂದ ಅವರನ್ನು ಅಭ್ಯರ್ಥಿ ಮಾಡಿದ್ದೇವೆ. ಚನ್ನಪಟ್ಟಣದಲ್ಲಿ ಯೋಗೇಶ್ವರ್ ಜನಪ್ರಿಯ ರಾಜಕಾರಣಿ. ಅವರಿಂದ ಕ್ಷೇತ್ರವು ಮತ್ತಷ್ಟು ಅಭಿವೃದ್ಧಿಯಾಗಲಿದೆ ಎಂದರು.

ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮಾತನಾಡಿ, ಯೋಗೇಶ್ವರ್ ಅವರು ಕಾಂಗ್ರೆಸ್ ಅಭ್ಯರ್ಥಿಯಾಗಿರುವುದರಿಂದ ತಾಲ್ಲೂಕಿನ ಜನರಿಗೆ ಹೊಸ ಹುರುಪು ಬಂದಿದೆ. ಲೋಕಸಭಾ ಚುನಾವಣೆಯಲ್ಲಿ ಡಿ.ಕೆ. ಸುರೇಶ್‌ಗೆ 85 ಸಾವಿರಕ್ಕೂ ಹೆಚ್ಚು ಮತ ಹಾಕಿ ಆಶೀರ್ವಾದ ಮಾಡಲು ಪ್ರಯತ್ನ ಮಾಡಿದಿರಿ. ಆದರೂ ಗೆಲ್ಲಲು ಆಗಲಿಲ್ಲ. ಆದರೂ ನಾವು ಕ್ಷೇತ್ರದ ಅಭಿವೃದ್ಧಿಯ ಬದ್ಧತೆ ಬಿಟ್ಟಿಲ್ಲ ಎಂದು ಹೇಳಿದರು.

ನನ್ನ ಮತ್ತು ಸುರೇಶ್ ನಂಬಿ ಜೆಡಿಎಸ್ ಮತ್ತು ಬಿಜೆಪಿ ಕಾರ್ಯಕರ್ತರು ಸಹ ನಮ್ಮೊಂದಿಗೆ ಕೈ ಜೋಡಿಸುತ್ತಿದ್ದಾರೆ. ಅವರ ಕೈ ಬಲಪಡಿಸಿಕೊಂಡು ಮುಂದಕ್ಕೆ ಕರೆದೊಯ್ಯುತ್ತೇವೆ. ಸೋಲುವ ಭಯದಿಂದ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಬಿಜೆಪಿ–ಜೆಡಿಎಸ್ ಒಂದಾಗಿವೆಯೇ ಹೊರತು, ಅವರಿಗೆ ಅಭಿವೃದ್ಧಿಯ ಬದ್ಧತೆ ಇಲ್ಲ ಎಂದು ವಾಗ್ದಾಳಿ ನಡೆಸಿದರು.

ತಾಲ್ಲೂಕು ಕಾಂಗ್ರೆಸ್ ಕಚೇರಿಯಿಂದ ತಹಶೀಲ್ದಾರ್ ಕಚೇರಿವರೆಗೆ ಒಂದು‌ ಕಿಲೋಮೀಟರ್‌ಗೂ ದೂರ ನಡೆದ ರೋಡ್ ಷೋನಲ್ಲಿ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ, ಸಚಿವರು, ಶಾಸಕರು, ವಿಧಾನ ಪರಿಷತ್ ಸದಸ್ಯರು, ಮುಖಂಡರು ಹಾಗೂ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.

ಬಿಜೆಪಿ–ಜೆಡಿಎಸ್ ನವರು ಯಾರನ್ನಾದರೂ ಅಭ್ಯರ್ಥಿ ಮಾಡಲಿ. ನಮ್ಮ ಯೋಗೇಶ್ವರ್ ಗೆಲ್ಲಿಸಲು ನಾವೆಲ್ಲರೂ ಒಗ್ಗಟ್ಟಿನಿಂದ ಕೆಲಸ ಮಾಡೋಣ‌. ಈಗಾಗಲೇ ಕ್ಷೇತ್ರಕ್ಕೆ ಐನೂರು ಕೋಟಿ ಬಿಡುಗಡೆಯಾಗಿದ್ದು, ಹಲವು ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲಾಗಿದೆ ಎಂದರು.

ಕಮಲ ಕೆರೆಯಲ್ಲಿ, ತೆನೆ ಹೊಲದಲ್ಲಿದ್ದರೆ ಚನ್ನ. ದಾನ–ಧರ್ಮ ಮಾಡುವ ‘ಕೈ’ ಚನ್ನಪಟ್ಟಣದಲ್ಲಿ ಅಧಿಕಾರದಲ್ಲಿ ಇದ್ದರೆ ಚನ್ನ. ನಾವು ಮೂರು ತಿಂಗಳಲ್ಲಿ ಮಾಡಿದ ಕೆಲಸವನ್ನು ಕುಮಾರಸ್ವಾಮಿ ಎರಡು ಸಲ ಗೆದ್ದರೂ ಮಾಡಿಲ್ಲ. ಅವರು ಮತ ಕೇಳಲು ಬಂದಾಗ ಈ ಬಗ್ಗೆ ಅವರನ್ನು ಜನರು ಪ್ರಶ್ನೆ ಮಾಡಬೇಕು ಎಂದು ಸಲಹೆ ನೀಡಿದರು.