ಬೆಳಗಾವಿ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಗೆ ಅಶ್ಲೀಲ ಪದ ಬಳಸಿ ನಿಂದಿಸಿದ್ದ ಪ್ರಕರಣದಲ್ಲಿ ಬಂಧನಕ್ಕೊಳಗಾಗಿದ್ದ ಬಿಜೆಪಿ ಮುಖಂಡ, ಎಂಎಲ್ ಸಿ ಸಿ.ಟಿ. ರವಿ ಅವರನ್ನು ಶುಕ್ರವಾರ (ಡಿ.20) ಬೆಳಗ್ಗೆ ಬೆಳಗಾವಿಯ ಜೆಎಂಎಫ್ ಸಿ ನ್ಯಾಯಾಲಯಕ್ಕೆ ಪೊಲೀಸರು ಹಾಜರುಪಡಿಸಿದ್ದು, ಈ ಸಂದರ್ಭದಲ್ಲಿ ಜಾಮೀನು ಅರ್ಜಿಯ ವಾದ ಆಲಿಸಿದ ನಂತರ ನ್ಯಾಯಾಧೀಶರು ಜಾಮೀನು ಆದೇಶ ಕಾಯ್ದಿರಿಸಿ, ವಿಚಾರಣೆಯನ್ನು ಮಧ್ಯಾಹ್ನ 3ಗಂಟೆಗೆ ಮುಂದೂಡಿದರು.
ಗುರುವಾರ ಸಂಜೆ 6-30ಕ್ಕೆ ಸುವರ್ಣ ಸೌಧದಲ್ಲಿ ಪೊಲೀಸರು ರವಿ ಅವರನ್ನು ಬಂಧಿಸಿದ್ದಾರೆ. ನಂತರ ಪೊಲೀಸರು ಜೀಪ್ ನಲ್ಲಿ ರಾತ್ರಿಯಿಡೀ ಮೂರು ಜಿಲ್ಲೆ ಸುತ್ತಿಸಿದ್ದಾರೆ. ಪೊಲೀಸರು ಯಾವುದೇ ನಿಯಮವನ್ನು ಸರಿಯಾಗಿ ಪಾಲಿಸಿಲ್ಲ. ಆರೋಪಿಯನ್ನು ಜಾಮೀನು ರಹಿತ ಪ್ರಕರಣದಲ್ಲಿ ಬಂಧಿಸಿದಾಗ, ಸೆಕ್ಷನ್ 480 ಅಡಿ ಜಾಮೀನಿಗೆ ಮನವಿ ಸಲ್ಲಿಸಲು ಅವಕಾಶವಿದೆ. ಸಿಟಿ ರವಿ ಸಾಮಾನ್ಯ ವ್ಯಕ್ತಿಯೂ ಅಲ್ಲ, ರೌಡಿಯೂ ಅಲ್ಲ. ಅವರೊಬ್ಬ ಜನಪ್ರತಿನಿಧಿ ಎಂದು ಬೆಳಗಾವಿ ಜೆಎಂಎಫ್ ಸಿ ಕೋರ್ಟ್ ನಲ್ಲಿ ಸಿ.ಟಿ.ರವಿ ಪರ ವಕೀಲರಾದ ಎಂ.ಬಿ.ಜಿರಲಿ ಅವರು ವಾದ ಮಂಡಿಸಿದ್ದಾರೆ.
ಘಟನೆ ನಡೆದ ಸ್ಥಳ ಅತ್ಯಂತ ಶಿಷ್ಟಾಚಾರದ ಸ್ಥಳವಾಗಿದೆ. ಅಲ್ಲಿ ಪ್ರತಿಯೊಂದು ಕೂಡಾ ದಾಖಲಾಗಿರುತ್ತದೆ. ಪೊಲೀಸರು ರವಿ ಅವರನ್ನು ಪಶುವಿನಂತೆ ಹೊತ್ತೊಯ್ದಿದ್ದಾರೆ. ಆರ್ಟಿಕಲ್ 21ರ ಪ್ರಕಾರ ಸಿಗುವ ಹಕ್ಕನ್ನು ಹತ್ತಿಕ್ಕಲಾಗಿದೆ. ಊಟ ಮಾಡಿಸಿಲ್ಲ, ಗಾಯಕ್ಕೆ ಚಿಕಿತ್ಸೆ ಕೊಡಿಸಲಿಲ್ಲ ಎಂದು ಸಾಲು, ಸಾಲು ಆರೋಪ ಮಾಡಿದ್ದಾರೆ. ಕಾಗ್ನಿಸಬಲಲ್ ಅಪರಾಧದಡಿ ಬಂಧಿಸಬೇಕಾಗಿಲ್ಲ. ಸಿಟಿ ರವಿ ಅವರದ್ದು ವಿಶೇಷ ಪ್ರಕರಣವಾಗಿದೆ. ವಿಪಕ್ಷ ನಾಯಕರು ಭೇಟಿಗೆ ಹೋದರು ಅವಕಾಶ ನೀಡಿಲ್ಲ. ನಿಯಮದ ಪ್ರಕಾರ ಸೆಕ್ಷನ್ 41ರ ಅಡಿ ಬಂಧಿಸಬೇಕಾಗಿಲ್ಲ. ರವಿಯನ್ನು ಬಂಧಿಸಿರುವುದೇ ಕಾನೂನು ಬಾಹಿರ. ಹೀಗಾಗಿ ವಿನಯಪೂರ್ವಕವಾಗಿ ಜಾಮೀನಿಗೆ ಮನವಿ ಮಾಡುತ್ತಿರುವುದಾಗಿ ವಕೀಲರು ವಾದಿಸಿದರು.
ಸಿ.ಟಿ.ರವಿ ಜಾಮೀನು ಅರ್ಜಿ ವಾದ ಆಲಿಸಿದ ನಂತರ ಜೆಎಂಎಫ್ ಸಿ ಕೋರ್ಟ್ ನ್ಯಾಯಾಧೀಶರು, ವಿಚಾರಣೆಯನ್ನು ಮಧ್ಯಾಹ್ನ 3ಗಂಟೆಗೆ ಮುಂದೂಡಿದರು. ಮಧ್ಯಾಹ್ನ ರಾಜ್ಯ ಸರ್ಕಾರದ ಪರ ವಕೀಲರ ವಾದ ಆಲಿಸಲಿದ್ದಾರೆ.