ಬೆಂಗಳೂರು: ಕರ್ನಾಟಕ ರಾಜ್ಯದಲ್ಲಿ ಜಾತಿಗಣತಿ (ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆ) ಮರುಸಮೀಕ್ಷೆ ನಡೆಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದ ವಿಶೇಷ ಸಚಿವ ಸಂಪುಟ ಸಭೆಯಲ್ಲಿ ಇಂದು ಅಧಿಕೃತ ಒಪ್ಪಿಗೆ ನೀಡಲಾಗಿದೆ. ಈ ಮೂಲಕ ರಾಜ್ಯದ ಜನಸಂಖ್ಯಾ ಆಧಾರದ ಮೇಲೆ ಹಿಂದುಳಿದ ವರ್ಗಗಳ ವಾಸ್ತವ ಸ್ಥಿತಿಯನ್ನು ಮರುಪರಿಶೀಲಿಸಲು ಸರ್ಕಾರ ಮುಂದಾಗಿದೆ.
ವಿಧಾನಸೌಧದಲ್ಲಿ ನಡೆದ ಈ ವಿಶೇಷ ಸಂಪುಟ ಸಭೆಯ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, “ಜಾತಿಗಣತಿ ಕುರಿತಂತೆ ಕಾಂತರಾಜು ಆಯೋಗದ ವರದಿ ಸಲ್ಲಿಸಿ ಈಗಾಗಲೇ 10 ವರ್ಷಗಳಾಗಿವೆ. ಹಿಂದುಳಿದ ವರ್ಗಗಳ ಆಯೋಗ ಕಾಯ್ದೆಯ ಸೆಕ್ಷನ್ 11 ಪ್ರಕಾರ, ಪ್ರತಿ 10 ವರ್ಷಕ್ಕೊಮ್ಮೆ ಹೊಸ ಸಮೀಕ್ಷೆ ನಡೆಸಬೇಕು ಎಂಬ ಉಲ್ಲೇಖವಿದೆ. ಈ ನಿಟ್ಟಿನಲ್ಲಿ ಈಗ ಹೊಸ ಸಮೀಕ್ಷೆ ಅವಶ್ಯಕವಾಗಿದೆ” ಎಂದು ತಿಳಿಸಿದರು.
ಕಾಂಗ್ರೆಸ್ ಹೈಕಮಾಂಡ್ ಕೂಡ ಈ ಬಗ್ಗೆ ಸಲಹೆ ನೀಡಿದ್ದು, ಅದರಂತೆ ಮರುಸಮೀಕ್ಷೆಗೆ ಕ್ರಮ ಕೈಗೊಳ್ಳಲಾಗಿದೆ ಎಂದು ಅವರು ಸ್ಪಷ್ಟಪಡಿಸಿದರು. 2015ರ ಸಮೀಕ್ಷೆಯ ವೇಳೆ ರಾಜ್ಯದ ಅಂದಾಜು ಜನಸಂಖ್ಯೆ 6.35 ಕೋಟಿ ಇರಬಹುದೆಂದು ನಿರ್ಧಾರಿಸಲಾಗಿತ್ತು. ಆದರೆ, ಜಾತಿಗಣತಿ ಆಧಾರದ ಮೇಲೆ ಸರ್ವೆ 5.98 ಕೋಟಿ ಜನರ ಮೇಲೆ ಮಾತ್ರ ನಡೆಯಿತು ಎಂದು ಅವರು ತಿಳಿಸಿದರು.
2018ರ ವಿಧಾನಸಭೆ ಚುನಾವಣೆಯಲ್ಲಿ ನಮ್ಮ ಪಕ್ಷ ಸೋತು, ಸಮ್ಮಿಶ್ರ ಸರಕಾರ ರಚನೆಯಾಯಿತು. ಎಚ್.ಡಿ. ಕುಮಾರಸ್ವಾಮಿ ಸಮ್ಮಿಶ್ರ ಸರಕಾರದಲ್ಲಿ ಮುಖ್ಯಮಂತ್ರಿಯಾಗಿದ್ದರು. ಅಂದು ಹಿಂದುಳಿದ ವರ್ಗಗಳ ಮಂತ್ರಿ ಪುಟ್ಟರಂಗಶೆಟ್ಟಿ ಆಗಿದ್ದರು. ಆಗ ಜಾತಿಗಣತಿ ವರದಿ ಪೂರ್ಣಗೊಂಡಿತ್ತಾದರೂ, ಎಚ್ಡಿ ಕುಮಾರಸ್ವಾಮಿ ವರದಿ ಸ್ವೀಕಾರ ಮಾಡಬೇಡಿ ಅಂತ ಒತ್ತಡ ಹಾಕಿದ ಹಿನ್ನೆಲೆಯಲ್ಲಿ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರು ವರದಿ ತೆಗೆದುಕೊಳ್ಳಲಿಲ್ಲ ಎಂದು ತಿಳಿಸಿದರು.














