ಮೈಸೂರು: ಹಿಜಾಬ್ ಕುರಿತ ಸರ್ಕಾರದ ತೀರ್ಮಾನ ಹಾಗೂ ಹೈಕೋರ್ಟ್ ತೀರ್ಪಿಗೆ ಅಸಮಾಧಾನ ವ್ಯಕ್ತಪಡಿಸಿರುವ ಫೆಡರೇಷನ್ ಆಫ್ ಮುಸ್ಲಿಂ ಆರ್ಗನೈಜೇಷನ್ಸ್ ಮಾರ್ಚ್ 17ರಂದು ನಗರದ ಬಂದ್‌ಗೆ ಕರೆ ನೀಡಿದೆ.
ಇಲ್ಲಿನ ಉದಯಗಿರಿಯ ಜಂಜಂ ಛತ್ರದಲ್ಲಿ ಬುಧವಾರ ನಡೆದ ವಿವಿಧ ಸಂಘಟನೆಗಳ ಪ್ರಮುಖರ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಯಿತು.
‘ಶಾಂತಿಯುತವಾದ ಹಾಗೂ ಸ್ವಯಂಪ್ರೇರಿತ ಬಂದ್ ನಡೆಸುವ ಮೂಲಕ ನಮ್ಮ ಅಸಮಾಧಾನವನ್ನು ತೋಡಿಕೊಳ್ಳಬೇಕಿದೆ. ಬಂದ್‌ನಲ್ಲಿ ಭಾಗವಹಿಸಬೇಕು ಎಂದು ಯಾರ ಮೇಲೂ ಬಲಪ್ರಯೋಗ ಮಾಡುವುದಿಲ್ಲ. ನಗರದ ಎಲ್ಲರೂ ನಮ್ಮ ಭಾವನೆಗಳಿಗೆ ಗೌರವ ಕೊಟ್ಟು ಬಂದ್‌ಗೆ ಸಹಕರಿಸಬೇಕು’ ಎಂದು ಮೌಲಾನ ಹರ್ಷದ್ ಅಹಮ್ಮದ್ ತಿಳಿಸಿದರು.
ಪಾಲಿಕೆ ಸದಸ್ಯರಾದ ಅಯೂಬ್‌ಖಾನ್, ಆರಿಫ್‌ಹುಸೇನ್, ಸೈಯ್ಯದ ಹಸ್ರತ್ ಉಲ್ಲಾ, ಸಮೀ, ಮುಖಂಡರಾದ ಜಕಾವುಲ್ಲಾ, ಮೌಲಾನ ಸಲ್ಮಾನ್ ಸೇರಿದಂತೆ ಸುಮಾರು 10ಕ್ಕೂ ಹೆಚ್ಚು ಸಂಘಟನೆಗಳ ಪ್ರತಿನಿಧಿಗಳು ಸಭೆಯಲ್ಲಿ ಭಾಗವಹಿಸಿದ್ದರು.