ಮನೆ ಕಾನೂನು ಕೇಂಬ್ರಿಜ್ ವಿವಿ ಭಾಷಣ: ರಾಹುಲ್ ವಿರುದ್ಧ ಪ್ರಕರಣ ದಾಖಲಿಸಲು ಕೋರಿದ್ದ ಬಿಜೆಪಿ ನಾಯಕನ ಅರ್ಜಿ ವಜಾ

ಕೇಂಬ್ರಿಜ್ ವಿವಿ ಭಾಷಣ: ರಾಹುಲ್ ವಿರುದ್ಧ ಪ್ರಕರಣ ದಾಖಲಿಸಲು ಕೋರಿದ್ದ ಬಿಜೆಪಿ ನಾಯಕನ ಅರ್ಜಿ ವಜಾ

0

ಕೇಂಬ್ರಿಜ್ ವಿಶ್ವವಿದ್ಯಾಲಯದಲ್ಲಿ ಈಚೆಗೆ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಅವರು ಮಾಡಿದ ಭಾಷಣದ ಸಂಬಂಧ ಎಫ್’ಐಆರ್ ದಾಖಲಿಸಲು ಆದೇಶಿಸುವಂತೆ ಕೋರಿ ಬಿಜೆಪಿ ನಾಯಕರೊಬ್ಬರು ಸಲ್ಲಿಸಿದ್ದ ಅರ್ಜಿಯನ್ನು ಗುರುವಾರ ವಾರಾಣಸಿ ನ್ಯಾಯಾಲಯವು ವಜಾ ಮಾಡಿದೆ.

ಕೇಂಬ್ರಿಜ್ ವಿಶ್ವವಿದ್ಯಾಲಯದಲ್ಲಿ ರಾಹುಲ್ ಗಾಂಧಿ ಅವರು ಮಾಡಿದ ಭಾಷಣವು ವಿಭಜನಕಾರಿ ಮತ್ತು ಭಾರತದ ಸಂವಿಧಾನಕ್ಕೆ ವಿರುದ್ಧವಾಗಿವೆ ಎಂದು ಆಕ್ಷೇಪಿಸಿ ಬಿಜೆಪಿ ಸದಸ್ಯ ಮತ್ತು ವಕೀಲ ಶಶಾಂಕ್ ಶೇಖರ್ ತ್ರಿಪಾಠಿ ಅವರು ಅರ್ಜಿ ಸಲ್ಲಿಸಿದ್ದರು.

ರಾಹುಲ್ ಗಾಂಧಿ ಅವರ ವಿರುದ್ಧ ಭಾರತೀಯ ದಂಡ ಸಂಹಿತೆ ಸೆಕ್ಷನ್ 120ಬಿ (ಕ್ರಿಮಿನಲ್ ಪಿತೂರಿ), 147 (ಗಲಭೆ ಸೃಷ್ಟಿ), 153ಎ (ದ್ವೇಷ ಹರಡುವುದು), 295ಎ (ದುರುದ್ದೇಶಪೂರಿತ ಕೃತ್ಯ), 295 (ಪೂಜಾ ಸ್ಥಳಕ್ಕೆ ಹಾನಿ) ಅಡಿ ಪ್ರಕರಣ ದಾಖಲಿಸಲು ಕೋರಲಾಗಿತ್ತು.

ಸಿಆರ್ಪಿಸಿ ಸೆಕ್ಷನ್ 156ರ ಅಡಿ ಸಲ್ಲಿಕೆಯಾಗಿದ್ದ ಅರ್ಜಿಯನ್ನು ನ್ಯಾಯಾಧೀಶರಾದ ಉಜ್ವಲ್ ಉಪಾಧ್ಯಾಯ ಅವರು ವಜಾ ಮಾಡಿದ್ದು, ಸಂವಿಧಾನದ 19(1)(ಎ) ಅಡಿ ದೊರೆತಿರುವ ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ವ್ಯಾಪ್ತಿಗೆ ರಾಹುಲ್ ಗಾಂಧಿ ಅವರು ನೀಡಿರುವ ಹೇಳಿಕೆಗಳು ಒಳಪಡಲಿವೆ ಎಂದು ಹೇಳಿದ್ದರು.

ದೇಶದ ಏಕತೆ ಮತ್ತು ಸಾರ್ವಭೌಮತೆಗೆ ಧಕ್ಕೆಯಾಗುವ ರೀತಿಯಲ್ಲಿ ರಾಹುಲ್ ಗಾಂಧಿ ಹೇಳಿಕೆಗಳು ಇದ್ದು, ರಾಷ್ಟ್ರೀಯ ಸ್ವಯಂಸೇವಕ ಸಂಘವನ್ನು ಭಯೋತ್ಪಾದನಾ ಸಂಘಟನೆಗೆ ಹೋಲಿಕೆ ಮಾಡಿದ್ದಾರೆ. ಮುಸ್ಲಿಮ್ ಭ್ರಾತೃತ್ವದ ಬಗ್ಗೆಯೂ ಮಾತನಾಡಿದ್ದು, ರಾಹುಲ್ ಹೇಳಿಕೆಗಳು 10 ಕೋಟಿ ಸ್ವಯಂಸೇವಕರಿಗೆ ನೋವುಂಟು ಮಾಡಿವೆ ಎಂದು ಅರ್ಜಿಯಲ್ಲಿ ವಿವರಿಸಲಾಗಿತ್ತು.

ಜಾತಿ, ಧರ್ಮ ಇತ್ಯಾದಿ ವಿಚಾರಗಳ ಆಧಾರದಲ್ಲಿ ದೇಶವನ್ನು ವಿಭಜಿಸುವ ಪಿತೂರಿಯ ಹೇಳಿಕೆಗಳನ್ನು ರಾಹುಲ್ ನೀಡಿದ್ದು, ಅದು ದ್ವೇಷ ಭಾಷೆಗೆ ಸಮನಾಗಿದೆ ಎಂದು ಆಕ್ಷೇಪಿಸಲಾಗಿತ್ತು.

ಹಿಂದಿನ ಲೇಖನಬಿಜೆಪಿ ಮತ್ತು ಕಾಂಗ್ರೆಸ್ ನಲ್ಲಿ ಅಭ್ಯರ್ಥಿಗಳ ಕೊರತೆ: ಹೆಚ್.ಡಿ.ಕುಮಾರಸ್ವಾಮಿ
ಮುಂದಿನ ಲೇಖನಪ್ರತಿಪಕ್ಷಗಳ ಗದ್ದಲದ ನಡುವೆ ಚರ್ಚೆಯಿಲ್ಲದೇ ಹಣಕಾಸು ಮಸೂದೆ  ಅಂಗೀಕಾರ