ನೋಟಿಸ್ ನೀಡದೆ ಅಥವಾ ಪೋಸ್ಟ್ ಹಾಕಿದ ಖಾತೆದಾರರ ವಾದ ಆಲಿಸದೆ ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಕಟಿಸಲಾದ ಪೋಸ್ಟ್‌ಗಳನ್ನು ತೆಗೆದುಹಾಕಬಹುದೇ ಎಂಬ ಕುರಿತು ಪ್ರತಿಕ್ರಿಯೆ ನೀಡುವಂತೆ ಸುಪ್ರೀಂ ಕೋರ್ಟ್ ಸೋಮವಾರ ಕೇಂದ್ರ ಸರ್ಕಾರಕ್ಕೆ ನೋಟಿಸ್ ನೀಡಿದೆ.
ಪೋಸ್ಟ್ ಮಾಡಿದವರ ಗುರುತು ಕಂಡು ಹಿಡಿಯಲು ಸಾಧ್ಯವಾಗುವಂತಿದ್ದರೆ ಅಂತಹವರ ಪೋಸ್ಟ್ ತೆಗೆಯುವ ಮುನ್ನ ಅವರ ಮಾತಿಗೂ ಕಿವಿಗೊಡಬೇಕು ಎಂಬುದು ಮೇಲ್ನೋಟಕ್ಕೆ ಮೂಡುವ ಅಭಿಪ್ರಾಯ ಎಂದು ನ್ಯಾಯಮೂರ್ತಿಗಳಾದ ಬಿ ಆರ್ ಗವಾಯಿ ಮತ್ತು ಆಗಸ್ಟೀನ್ ಜಾರ್ಜ್ ಮಸಿಹ್ ಅವರಿದ್ದ ಪೀಠ ತಿಳಿಸಿತು.
ಸರ್ಕಾರದ ಸೂಚನೆ ಮೇರೆಗೆ ಸಾಮಾಜಿಕ ಮಾಧ್ಯಮಗಳ ಖಾತೆದಾರರಿಗೆ ತಿಳಿಸದೆಯೇ ಎಕ್ಸ್ ರೀತಿಯ ಮಧ್ಯಸ್ಥ ವೇದಿಕೆಗಳು ಟ್ವೀಟ್‌ಗಳನ್ನು ತೆಗೆದುಹಾಕುತ್ತಿರುವುದನ್ನು ಪ್ರಶ್ನಿಸಿ ಸಾಫ್ಟ್‌ವೇರ್ ಫ್ರೀಡಂ ಲಾ ಸೆಂಟರ್ ಅರ್ಜಿ ಸಲ್ಲಿಸಿತ್ತು.
ಅರ್ಜಿದಾರರ ಪರವಾಗಿ ಹಾಜರಾದ ಹಿರಿಯ ವಕೀಲೆ ಇಂದಿರಾ ಜೈಸಿಂಗ್ , ಸರ್ಕಾರಕ್ಕೆ ಮಾಹಿತಿಯನ್ನು ತೆಗೆದುಹಾಕುವ ಅಧಿಕಾರವಿದ್ದರೂ, ಆ ಟ್ವೀಟ್ ಪೋಸ್ಟ್ ಮಾಡಿದ ವ್ಯಕ್ತಿಗೆ ನೋಟಿಸ್ ನೀಡಬೇಕು. ಹಾಗೆ ಮಾಡದಿರುವುದು ಸ್ವಾಭಾವಿಕ ನ್ಯಾಯ ತತ್ವದ ಉಲ್ಲಂಘನೆಯಾಗುತ್ತದೆ ಎಂದು ವಾದಿಸಿದರು.
ವ್ಯಕ್ತಿ ಅಥವಾ ಮಧ್ಯಸ್ಥಗಾರರಿಗೆ ಈ ಸಂಬಂಧ ನೋಟಿಸ್ ನೀಡಬೇಕು ಎಂದು ಪ್ರಸಕ್ತ ಕಾನೂನು ಖಚಿತವಾಗಿ ಹೇಳುತ್ತದೆ ಎಂದು ಅವರು ಗಮನ ಸೆಳೆದರು.
ಅಥವಾ ಎಂದು ಹೇಳಿರುವುದರಿಂದಾಗಿ, ಪ್ರಸ್ತುತ ಮಧ್ಯಸ್ಥ ವೇದಿಕೆಗೆ ಮಾತ್ರವೇ ನೋಟಿಸ್ ನೀಡಲಾಗುತ್ತಿದೆ. ಕಾನೂನಿನಲ್ಲಿ ವ್ಯಕ್ತಿ ʼಅಥವಾʼ ಮಧ್ಯಸ್ಥಗಾರ ಎಂಬ ಪದ ಇರುವುದರಿಂದ ಹೀಗೆ ಆಗುತ್ತಿದೆ. ನೋಟಿಸ್ ಗೌಪ್ಯವಾಗಿರಬೇಕು ಎಂದು ಪ್ರಸ್ತುತ ನಿಯಮ ಹೇಳುತ್ತದೆ. ಹಾಗಾದರೆ, ಇದು ಶವದ ಪೆಟ್ಟಿಗೆಗೆ ಹೊಡೆಯುವ ಕೊನೆಯ ಮಳೆಯಂತೆ. ಪೋಸ್ಟ್ ತೆಗೆದುಹಾಕುವ ಅಧಿಕಾರವನ್ನು ನಾನು ಪ್ರಶ್ನಿಸುತ್ತಿಲ್ಲ ಬದಲಿಗೆ ಹಾಗೆ ಮಾಡುವ ಮುನ್ನ ಪೋಸ್ಟ್ ಮಾಡಿದವರ ಮಾತು ಕೇಳಬೇಕು ಎನ್ನುತ್ತಿದ್ದೇನೆ. ಈ ಪ್ರಶ್ನೆ ಸಂವಿಧಾನದ 19(1)(ಎ) ವಿಧಿಗೆ ಸಂಬಂಧಿಸಿದ್ದಾಗಿದೆ ಎಂದು ಅವರು ಹೇಳಿದರು.
ಅಂತಿಮವಾಗಿ ಅರ್ಜಿಯ ಸಂಬಂಧ ಸುಪ್ರೀಂ ಕೋರ್ಟ್ ಕೇಂದ್ರ ಸರ್ಕಾರದ ಪ್ರತಿಕ್ರಿಯೆ ಕೇಳಿತು.