ಹಾಸನ: ದೇಶದಲ್ಲಿ ದರ್ಶನ್ ಸುದ್ದಿ ಒಂದೇ ಇರೋದಾ? ಬೆಳಿಗ್ಗೆ ಎದ್ದರೆ ಟಿವಿಯಲ್ಲಿ ಅದೇ ಬರ್ತಿದೆ. ಅವನೇನು ಸಮಾಜಕ್ಕೆ ರೋಲ್ ಮಾಡೆಲ್ಲ? ಒಳ್ಳೆಯ ಕಲಾವಿದ ಜನರು ಇಷ್ಟ ಪಡ್ತಾರೆ ಅಂತ ಮಾಡಬಾರದ್ದನ್ನ ಮಾಡಿದ್ರೆ ಕಾನೂನು ಕ್ರಮ ತಗೊಳುತ್ತೆ ಎಂದು ಹಾಸನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎನ್.ರಾಜಣ್ಣ ದರ್ಶನ್ ವಿಚಾರಕ್ಕೆ ಗರಂ ಆಗಿದ್ದಾರೆ.
ನಿನ್ನೆ ನಿಧನರಾದ ಹಾಸನದ ಸಮಾಜಸೇವಕ ಮಹಂತಪ್ಪ ಅವರ ಅಂತಿಮ ದರ್ಶನ ಪಡೆದ ಸಚಿವರು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡುವಾಗ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕೊಲೆ ಕೇಸ್ನಲ್ಲಿ ಬೆಂಗಳೂರಿನ ಪರಪ್ಪನ ಅಗ್ರಹಾರ ಸೇರಿದ್ದ ನಟ ದರ್ಶನ್ ಅವರು ಜೈಲಿನಲ್ಲಿ ರೌಡಿಗಳ ಜೊತೆ ಕಾಫಿ, ಸಿಗರೇಟು ಸೇದುತ್ತ ಕೂತಿದ್ದ ರಾಜಾತಿಥ್ಯದ ಫೋಟೋವೊಂದು ವೈರಲ್ ಆಗಿತ್ತು. ಇದರ ಬೆನ್ನಲ್ಲೇ ಇದೀಗ ದರ್ಶನ್ ಅವರನ್ನು ಬಳ್ಳಾರಿಯ ಜೈಲಿಗೆ ಶಿಫ್ಟ್ ಮಾಡಿದ್ದಾರೆ.
ದರ್ಶನ್ ಪ್ರಕರಣದ ಬಗ್ಗೆ ಮಾತನಾಡಿದ ಸಚಿವ ಕೆ.ಎನ್.ರಾಜಣ್ಣ ಗರಂ ಆಗಿದ್ದಾರೆ. ದೇಶದಲ್ಲಿ ದರ್ಶನದ್ದು ಒಂದೇ ಇರೋದಾ, ಬೆಳಿಗ್ಗೆ ಎದ್ದರೆ ಟಿವಿಯಲ್ಲಿ ತೋರುಸ್ತೀರಾ. ಅವನೇನು ಸಮಾಜಕ್ಕೆ ರೋಲ್ ಮಾಡೆಲ್ಲ? ಬರೀ ಅವನದ್ದೇ ಸುದ್ದಿ. ಒಳ್ಳೆಯ ಕಲಾವಿದ ಅಂತ ಎಲ್ಲರೂ ಒಪ್ಪುತ್ತೀವಿ. ಒಳ್ಳೆಯ ಕಲಾವಿದ ಜನರು ಇಷ್ಟ ಪಡ್ತಾರೆ ಅಂತ ಮಾಡಬಾರದ್ದನ್ನ ಮಾಡಿದ್ರೆ ಕಾನೂನು ಕ್ರಮ ತಗೊಳುತ್ತೆ. ಅದನ್ನು ಬೆಳಿಗ್ಗೆ, ಸಾಯಂಕಾಲ ತೋರಿಸುತ್ತಾ ಇದ್ದರೆ ನೋಡಲು ಅಸಹ್ಯ ಆಗುತ್ತೆ ಎಂದರು.