ಲಂಡನ್(ಇಂಗ್ಲೆಂಡ್): ರಸ್ತೆ ಅಪಘಾತದಲ್ಲಿ 30 ವರ್ಷದ ಭಾರತೀಯ ವಿದ್ಯಾರ್ಥಿ ಸಾವನ್ನಪ್ಪಿ, ಇತರ ನಾಲ್ವರು ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿರುವ ಘಟನೆ ಪೂರ್ವ ಇಂಗ್ಲೆಂಡ್ ನ ಲೀಸೆಸ್ಟರ್ ಶೈರ್ ನಲ್ಲಿ ಮಂಗಳವಾರ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಅಪಘಾತದಲ್ಲಿ ಗಾಯಗೊಂಡವರು ಹಾಗೂ ಮೃತ ಆಂಧ್ರಪ್ರದೇಶಕ್ಕೆ ಸೇರಿದವರಾಗಿದ್ದಾರೆ ಎಂದು ವರದಿಯಾಗಿದೆ.
ಚಿರಂಜೀವಿ ಪಾಂಗುಲೂರಿ(30) ಘಟನಾ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಈತನೊಂದಿಗಿದ್ದ ಸಹ ಸವಾರರಾದ ಓರ್ವ ಮಹಿಳೆ, ಇಬ್ಬರು ಪುರುಷರು ಹಾಗೂ ಚಾಲಕನಿಗೆ ಗಂಭೀರ ಗಾಯಗಳಾಗಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಅಪಾಯಕಾರಿ ಚಾಲನೆ ಘಟನೆಗೆ ಕಾರಣವಾಗಿದ್ದು, 27 ವರ್ಷದ ವ್ಯಕ್ತಿಯನ್ನು ಬಂಧಿಸಲಾಗಿತ್ತು. ಆದರೆ, ಆತ ಜಾಮೀನಿನ ಮೇಲೆ ಹೊರ ಬಂದಿದ್ದಾನೆ. ಇವರೆಲ್ಲರೂ ಬೂದು ಬಣ್ಣದ ಮಜ್ದಾ 3 ತಮುರಾ ಕಾರಿನಲ್ಲಿ ಕೌಂಟಿಯಿಂದ ಲೀಸೆಸ್ಟರ್ ಶೈರ್ ನಿಂದ ಮಾರ್ಕೆಟ್ ಹಾರ್ಬರೋ ಕಡೆಗೆ ಪ್ರಯಾಣಿಸುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಘಟನೆ ನಡೆದಾಗ ಡ್ಯಾಶ್ ಕ್ಯಾಮ್ ನಲ್ಲಿ ಯಾವುದಾದರೂ ದೃಶ್ಯಗಳು ಸೆರೆಯಾಗಿದೆಯೇ ಎಂದು ಪರಿಶೀಲಿಸಲಾಗುತ್ತಿದೆ ಎಂದು ಲೀಸೆಸ್ಟರ್ಶೈರ್ ಪೊಲೀಸರ ಹೇಳಿಕೆ ತಿಳಿಸಿದೆ.