ಮನೆ ಅಪರಾಧ ಕಾರು ಅಪಘಾತ: ಓರ್ವ ಮಹಿಳೆ ಸಾವು, ಇಬ್ಬರಿಗೆ ಗಾಯ

ಕಾರು ಅಪಘಾತ: ಓರ್ವ ಮಹಿಳೆ ಸಾವು, ಇಬ್ಬರಿಗೆ ಗಾಯ

0

ತುಮಕೂರು : ಮದುವೆ ಮುಗಿಸಿಕೊಂಡು ವಾಪಸ್ ಬರುವಾಗ ಕಾರು ಅಪಘಾತಕ್ಕೀಡಾಗಿದ್ದು, ಒಬ್ಬ ಮಹಿಳೆ ಸಾವಿಗೀಡಾಗಿದ್ದಾರೆ. ಉಳಿದಂತೆ ಕಾರಿನಲ್ಲಿದ್ದ ಗಂಡ ಹೆಂಡತಿ ಗಂಭೀರ ಗಾಯಗೊಂಡಿದ್ದು, ಇಬ್ಬರನ್ನೂ ಸ್ಥಳೀಯರು ಆಸ್ಪತ್ರೆ ದಾಖಲಿಸಿದ್ದಾರೆ.

Join Our Whatsapp Group


ಈ ಘಟನೆ ತುಮಕೂರು ಜಿಲ್ಲೆಯ ಮಧುಗಿರಿ ತಾಲೂಕಿನ ಮಿಡಿಗೇಶಿ ಹೋಬಳಿಯ ಬೇಡತ್ತೂರು ಗೇಟ್ ಸಮೀಪ ಸಂಜೆ 6:00 ಗಂಟೆಗೆ ಅಪಘಾತ ಸಂಭವಿಸಿದೆ. ಪಾವಗಡದ ಸ್ಥಳೀಯ ಜೆಡಿಎಸ್ ಮುಖಂಡ ಶಿವಪ್ಪ ನಾಯಕ ಹಾಗೂ ಅವರ ಧರ್ಮಪತ್ನಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಮತ್ತೋರ್ವ ಮಹಿಳೆ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡು ಮೃತಪಟ್ಟಿದ್ದಾರೆ. ಮೃತ ಮಹಿಳೆಯ ಬಗ್ಗೆ ಮಾಹಿತಿ ಇನ್ನೂ ಲಭ್ಯವಾಗಿಲ್ಲ. ಪೊಲೀಸರು ಸ್ಥಳಕ್ಕೆ ಆಗಮಿಸಿದ್ದು, ಪರಿಶೀಲನೆ ಮಾಡುತ್ತಿದ್ದಾರೆ.
ಪಾವಗಡ ಜೆಡಿಎಸ್ ಮುಖಂಡ ಶಿವಪ್ಪ ಕೆಲವು ದಿನಗಳ ಹಿಂದಷ್ಟೇ ಖರೀದಿ ಮಾಡಿದ್ದ ಕಾರಿನಲ್ಲಿ ಸಂಬಂಧಿಕರ ಮದುವೆಗೆ ಹೋಗಿದ್ದಾರೆ. ಹೊಸ ಕಾರನ್ನು ಡೆಲಿವರಿ ಕೊಡುವಾಗ ಕಟ್ಟುವ ರಿಬ್ಬನ್ ಕೂಡ ತೆಗೆದಿರಲಿಲ್ಲ. ಆದರೂ, ಡ್ರೈವರ್ ಇಟ್ಟುಕೊಳ್ಳದೇ ಸಂಬಂಧಿಕರ ಮದುವೆಗೆ ಹೋಗಿದ್ದರು. ಆದರೆ, ಮದುವೆ ಮುಗಿಸಿಕೊಂಡು ವಾಪಸ್ ಬರುವಾಗ ಕಾರಿನ ನಿಯಂತ್ರಣ ತಪಪಿ ರಸ್ತೆ ಬದಿಯಲ್ಲಿದ್ದ ನೀರಿನ ಸಂಪ್‌ಗೆ ಗುದ್ದಿದ್ದಾರೆ. ಸಿಮೆಂಟ್‌ನಿಂದ ನಿರ್ಮಿಸಲಾದ ನೀರಿನ ತೊಟ್ಟಿಗೆ ಡಿಕ್ಕಿ ಹೊಡೆದ ವೇಳೆ ಹಿಂಬದಿ ಸೀಟಿನಲ್ಲಿ ಕುಳಿತಿದ್ದ ಮಹಿಳೆ ಕಾರಿನ ಗಾಜಿನಿಂದ ಸೀದಾ ನೀರಿನ ತೊಟ್ಟಿಯೊಳಗೆ ಬಿದ್ದಿದ್ದಾರೆ.


ಕಾರು ಅಪಘಾತಕ್ಕೀಡಾಗಿದ್ದ ವೇಳೆಯೇ ಗಾಯಗೊಂಡು ನೀರಿನ ತೊಟ್ಟಿಗೆ ಬಿದ್ದ ಮಹಿಳೆ ಮೇಲೆ ಬರಲಾಗದೇ ಅಲ್ಲಿಯೇ ಸಾವಿಗೀಡಾಗಿದ್ದಾರೆ. ಇನ್ನು ನೀರಿನ ತೊಟ್ಟಿಗೆ ಬಿದ್ದ ಮಹಿಳೆಯನ್ನು ರಕ್ಷಣೆ ಮಾಡುವುದಕ್ಕೂ ಸಾಧ್ಯವಾಗದಂತೆ ಕಾರಿನ ಮಾಲೀಕ ಶಿವಪ್ಪ ಕಾಲು ಮುರಿದುಕೊಂಡು ಗಂಭೀರವಾಗಿ ಗಾಯಗೊಂಡು ಬಳಲುತ್ತಿದ್ದಾರೆ. ಇತ್ತ ಅವರ ಪತ್ನಿಯೂ ಗಾಯಗೊಂಡಿದ್ದಾರೆ. ಇನ್ನು ಸ್ಥಳೀಯರು ಬಂದು ನೋಡುವ ವೇಳೆಗೆ ಮಹಿಳೆ ತೊಟ್ಟಿಯಲ್ಲಿ ಸಾವನ್ನಪ್ಪಿದ್ದು, ಉಳಿದಂತೆ ಕಾರಿನಲ್ಲಿದ್ದ ಒಬ್ಬರು ಗಾಯದಿಂದ ಬಳಲುತ್ತಿದ್ದರು. ನಂತರ ಸ್ಥಳೀಯರ ನೆರವಿನಿಂದ ಕಾರಿನಿಂದ ಹೊರಬಂದು ಮೇಲೇಳಲೂ ಸಾಧ್ಯವಾಗದೇ ರಸ್ತೆ ಪಕ್ಕದಲ್ಲಿ ಆಂಬುಲೆನ್ಸ್ ಬರುವವರೆಗೂ ಮಲಗಿದ್ದರು. ಹೆಂಡತಿ ಪ್ರಜ್ಞೆ ತಪ್ಪಿದ್ದರೆ, ಶಿವಪ್ಪ ಗಾಯದಿಂದ ನರಳಾಡುತ್ತಿದ್ದರು.


ನಂತರ ಸ್ಥಳೀಯರ ಸಹಾಯದೊಂದಿಗೆ ಗಾಯಾಳುಗಳಾದ ಶಿವಪ್ಪ ನಾಯಕ ಮತ್ತು ಅವರ ಪತ್ನಿಯನ್ನು ಮಧುಗಿರಿ ಸಾರ್ವಜನಿಕ ಆಸ್ಪತ್ರೆಗೆ ಕರೆದೊಯ್ದು ಪ್ರಾಥಮಿಕ ಚಿಕಿತ್ಸೆ ಕೊಡಿಸಲಾಯಿತು. ನಂತರ, ಹೆಚ್ಚಿನ ಚಿಕಿತ್ಸೆಗಾಗಿ ತುಮಕೂರು ಜಿಲ್ಲಾ ಆಸ್ಪತ್ರೆಗೆ ರವಾನಿಸಿದ್ದಾರೆ. ಈ ಪ್ರಕರಣ ಮಿಡಿಗೇಶಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.