ಮನೆ ಅಪರಾಧ ಟ್ರಾಲಿಗೆ ಕಾರು ಡಿಕ್ಕಿ: ಆರು ಮಂದಿ ಸಾವು

ಟ್ರಾಲಿಗೆ ಕಾರು ಡಿಕ್ಕಿ: ಆರು ಮಂದಿ ಸಾವು

0

ಸಿರೋಹಿ (ರಾಜಸ್ಥಾನ) : ಜಿಲ್ಲೆಯಲ್ಲಿ ಇಂದು ನಸುಕಿನಜಾವ 3 ಗಂಟೆ ಸುಮಾರಿಗೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ 6 ಮಂದಿ ದಾರುಣವಾಗಿ ಸಾವನ್ನಪ್ಪಿದ್ದಾರೆ. ಅಬುರೋಡ್ ಸದರ್ ಪೊಲೀಸ್ ಠಾಣೆ ಪ್ರದೇಶದ ಕಿವರ್ಲಿ ಬಳಿ ಈ ದುರ್ಘಟನೆ ನಡೆದಿದೆ. ಮೃತರಲ್ಲಿ ಮಕ್ಕಳು ಮತ್ತು ಮಹಿಳೆಯರು ಕೂಡ ಸೇರಿದ್ದಾರೆ.

Join Our Whatsapp Group

ಓರ್ವ ಮಹಿಳೆ ಗಂಭೀರವಾಗಿ ಗಾಯಗೊಂಡಿದ್ದು, ಪ್ರಥಮ ಚಿಕಿತ್ಸೆಯ ನಂತರ ಅವರನ್ನು ಸಿರೋಹಿ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಘಟನೆಯ ಬಗ್ಗೆ ಮಾಹಿತಿ ಪಡೆದ ಸಿಒ ಗೋಮಾರಾಮ್, ಸದರ್ ಎಸ್‌ಹೆಚ್‌ಒ ದರ್ಶನ್ ಸಿಂಗ್, ಎಸ್‌ಐ ಗೋಕುಲ್‌ರಾಮ್, ಹೆಡ್ ಕಾನ್‌ಸ್ಟೇಬಲ್ ವಿನೋದ್ ಮತ್ತು ಇತರ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ದೌಡಾಯಿಸಿ ಮಾಹಿತಿ ಸಂಗ್ರಹಿಸಿದರು.

ಜಾಲೋರ್ ನಿವಾಸಿಗಳು ಅಹಮದಾಬಾದ್‌ನಿಂದ ಜಾಲೋರ್‌ಗೆ ಕಾರಿನಲ್ಲಿ ಪ್ರಯಾಣಿಸುತ್ತಿದ್ದರು ಎಂದು ಸಿಒ ಗೋಮಾರಾಮ್ ತಿಳಿಸಿದ್ದಾರೆ. ರಾಷ್ಟ್ರೀಯ ಹೆದ್ದಾರಿ 27 ರ ಅಬುರೋಡ್ ಸದರ್ ಪೊಲೀಸ್ ಠಾಣೆಯ ಕಿವರ್ಲಿ ಬಳಿ ಕಾರು ಮುಂದೆ ಚಲಿಸುತ್ತಿದ್ದ ಟ್ರಾಲಿಗೆ ಡಿಕ್ಕಿ ಹೊಡೆದಿದೆ. ಈ ವೇಳೆ ಕಾರಿನಲ್ಲಿದ್ದವರ ಪೈಕಿ ನಾಲ್ವರು ಸ್ಥಳದಲ್ಲೇ ಸಾವನ್ನಪ್ಪಿದರೆ, ಇಬ್ಬರು ಚಿಕಿತ್ಸೆಯ ಸಮಯದಲ್ಲಿ ಕೊನೆಯುಸಿರೆಳೆದಿದ್ದಾರೆ. ಘಟನೆಯಲ್ಲಿ ಗಾಯಗೊಂಡ ಇನ್ನೋರ್ವ ಮಹಿಳೆಯನ್ನು ಆಂಬ್ಯುಲೆನ್ಸ್ ಸಹಾಯದಿಂದ ಆಸ್ಪತ್ರೆಗೆ ಕರೆದೊಯ್ಯಲಾಗಿದೆ, ಅಲ್ಲಿ ಪ್ರಥಮ ಚಿಕಿತ್ಸೆಯ ನಂತರ ಅವರನ್ನು ಸಿರೋಹಿ ಆಸ್ಪತ್ರೆಗೆ ಸೇರಿಸಲಾಗಿದೆ. ಮೃತದೇಹಗಳನ್ನು ಶವಾಗಾರದಲ್ಲಿ ಇಡಲಾಗಿದ್ದು, ಕುಟುಂಬ ಸದಸ್ಯರಿಗೆ ಮಾಹಿತಿ ನೀಡಲಾಗಿದೆ ಎಂದು ಸಿಒ ಹೇಳಿದರು.

ರಾಷ್ಟ್ರೀಯ ಹೆದ್ದಾರಿಯಲ್ಲಿ ಗಸ್ತು ತಿರುಗುತ್ತಿದ್ದಾಗ, ಕಿವರ್ಲಿಯ ಮುಂದೆ ದೊಡ್ಡ ಸ್ಫೋಟದ ರೀತಿ ಶಬ್ದ ಕೇಳಿಸಿತು, ಆಗ ತಕ್ಷಣಕ್ಕೆ ಸ್ಥಳಕ್ಕೆ ತಲುಪಿ ಆಂಬ್ಯುಲೆನ್ಸ್ ಮತ್ತು ಉನ್ನತ ಅಧಿಕಾರಿಗಳಿಗೆ ಮಾಹಿತಿ ನೀಡಲಾಯಿತು ಎಂದು ಹೆಡ್ ಕಾನ್​ಸ್ಟೇಬಲ್ ವಿನೋದ್ ಲಂಬಾ ತಿಳಿಸಿದ್ದಾರೆ. ಸ್ಥಳದಲ್ಲೇ ಕ್ರೇನ್ ಕರೆಯಿಸಿ ಟ್ರಾಲಿಯಲ್ಲಿ ಸಿಲುಕಿದ್ದ ಕಾರನ್ನು ಹೊರತೆಗೆಯಲಾಯಿತು. ಮೃತದೇಹಗಳನ್ನು ಕಾರಿನ ಡೋರ್​ ಒಡೆದು ಹೊರತೆಗೆಯಲಾಗಿದೆ. ಸುಮಾರು 40 ನಿಮಿಷಗಳ ಕಾರ್ಯಾಚರಣೆ ನಂತರ ಶವಗಳನ್ನು ಹೊರತೆಗೆಯಲು ಸಾಧ್ಯವಾಯಿತು ಎಂದರು.

ಈ ಭೀಕರ ರಸ್ತೆ ಅಪಘಾತದಲ್ಲಿ ಮೃತಪಟ್ಟವರೆಲ್ಲರೂ ಜಾಲೋರ್ ಜಿಲ್ಲೆಯ ನಿವಾಸಿಗಳು. ಮೃತರಲ್ಲಿ ದಂಪತಿ ಮತ್ತು ಅವರ ಮಗ ಸೇರಿದ್ದಾರೆ. ಅಪಘಾತದಲ್ಲಿ ಸಾವನ್ನಪ್ಪಿದವನ್ನು ನಾರಾಯಣ್ ಪ್ರಜಾಪತ್ (58), ಅವರ ಪತ್ನಿ ಪೋಷಿ ದೇವಿ (55) ಮತ್ತು ಅವರ ಮಗ ದುಷ್ಯಂತ್ (24), ಕಲುರಾಮ್ (40), ಅವರ ಮಗ ಯಶ್​ರಾಮ್ (4) ಎಂದು ಗುರುತಿಸಲಾಗಿದೆ. ಮತ್ತೊಬ್ಬ ಮಹಿಳೆ ಜಾಲೋರ್ ನಿವಾಸಿ ದರಿಯಾ ದೇವಿ (35) ಅವರು ಸಿರೋಹಿಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕಾರಿನಲ್ಲಿ ಒಟ್ಟು 7 ಜನರಿದ್ದರು, ಅದರಲ್ಲಿ 6 ಜನರು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.