ಚಿಕ್ಕಬಳ್ಳಾಪುರ: ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ನಾಯಿಂದ್ರಹಳ್ಳಿ ಬಳಿ ಕಾರು ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದ ರಭಸಕ್ಕೆ ಗಂಡ ಮತ್ತು ಹೆಂಡತಿ ಸಾವನ್ನಪ್ಪಿರುವ ಘಟನೆ ಇಂದು ಬೆಳಗ್ಗೆ ನಡೆದಿದೆ.
ಕೋಲಾರ ತಾಲ್ಲೂಕಿನ ಕ್ಯಾಲನೂರು ಗ್ರಾಮ ಪಂಚಾಯತಿ ವ್ಯಾಪ್ತಿಗೆ ಬರುವ ಚನ್ನಸಂದ್ರ ಗ್ರಾಮದ ವಾಸಿಗಳಾದ ಸುಬ್ರಮಣಿ ಬಿನ್ ಕೋಡಳ್ಳಿ ಬೈರಪ್ಪ (55 ವರ್ಷ) ಧರ್ಮಪತ್ನಿ ಗಾಯತ್ರಮ್ಮ (50ವರ್ಷ ) ಮೃತ ದುರ್ದೈವಿಗಳು.
ಇಬ್ಬರು ತಮ್ಮ ಗ್ರಾಮದಿಂದ ಹೆವಿ ಡ್ಯೂಟೀ ದ್ವಿಚಕ್ರ ವಾಹನದಲ್ಲಿ ನಾಯಿಂದ್ರಹಳ್ಳಿ ಗ್ರಾಮಕ್ಕೆ ತಿಥಿ ಕಾರ್ಯಕ್ರಮಕ್ಕೆ ಆಗಮಿಸುತ್ತಿದ್ದಾಗ ಅತಿ ವೇಗದಿಂದ ಬೆಂಗಳೂರು ಕಡೆಯಿಂದ ಚಿಂತಾಮಣಿಗೆ ಹೋಗುತ್ತಿದ್ದ ಕಾರು ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದ ರಭಸಕ್ಕೆ ಗಂಡ ಹೆಂಡತಿ ತೀವ್ರ ಗಾಯಗೊಂಡಿದ್ದಾರೆ.
ಕೂಡಲೇ ಗಾಯಳುಗಳನ್ನು ಅಂಬುಲೆನ್ಸ್ ಮೂಲಕ ನಗರದ ಸಾರ್ವಜನಿಕ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ಫಲಕರಿಯಾಗದೆ ಇಬ್ಬರು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.
ಘಟನೆ ಕುರಿತು ಗ್ರಾಮಾಂತರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.