ಕುಣಿಗಲ್ : ಟೈರ್ ಸಿಡಿದು ಚಾಲಕನ ನಿಯಂತ್ರಣ ತಪ್ಪಿ ಕಾರೊಂದು ಹಳ್ಳಕ್ಕೆ ಉರುಳಿ ಬಿದ್ದ ಪರಿಣಾಮ ಮಹಿಳೆ ಮೃತಪಟ್ಟು ಇಬ್ಬರು ಗಾಯಗೊಂಡ ಘಟನೆ ತಾಲೂಕಿನ ಹುಲಿಯೂರುದುರ್ಗ ಹೋಬಳಿ ಸುಗ್ಗನಹಳ್ಳಿ ಸಮೀಪ ಗುರುವಾರ ನಡೆದಿದೆ.
ಚಾಮರಾಜನಗರದ ಕೊಳ್ಳೆಗಾಲ ನಿವಾಸಿ ಶಂಕರಮ್ಮ (45) ಮೃತ ದುರ್ದೈವಿ. ಮಂಜುನಾಥ್, ಅಪ್ಪು ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.
ಶಂಕರಮ್ಮ, ಮಂಜುನಾಥ್ ಹಾಗೂ ಅಪ್ಪು ಅವರು ಕಾರಿನಲ್ಲಿ ಕೊಳ್ಳೆಗಾಲದಿಂದ ನಾಗಮಂಗಲದ ಕಾರ್ಯಕ್ರಮದಲ್ಲಿ ಭಾಗಿಯಾಗಿ, ಶಂಕರಮ್ಮ ಅವರ ಮಗ ಪಾಂಡು ಅವರ ಬೆಂಗಳೂರಿನ ಮನೆಗೆ ಹೋಗುತ್ತಿರುವಾಗ ಅವಘಡ ನಡೆದಿದೆ.
ತೀವ್ರವಾಗಿ ಗೊಂಡಿದ್ದ ಶಂಕರಮ್ಮ ಅವರನ್ನು ಮಂಡ್ಯದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ, ಹುಲಿಯೂರುದುರ್ಗ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.