ಚಿತ್ತಾಪುರ; ಚಾಲಕನ ನಿಯಂತ್ರಣ ತಪ್ಪಿದ ಕಾರೊಂದು ಕಾಗಿಣಾ ನದಿಗೆ ಬಿದ್ದು ಚಾಲಕ ಮೃತಪಟ್ಟು, ಇಬ್ಬರು ಗಾಯಗೊಂಡಿರುವ ಘಟನೆ ತಾಲೂಕಿನ ದಂಡೋತಿ ಸಮೀಪ ರವಿವಾರ (ಅ.20) ರಾತ್ರಿ 11 ಗಂಟೆ ಸುಮಾರಿಗೆ ನಡೆದಿದೆ.
ಚಿತ್ತಾಪುರ ಪಟ್ಟಣದ ಬಹಾರಪೇಠ್ ನಿವಾಸಿ ನಿಂಗಪ್ಪ ಪೂಜಾರಿ (50) ಮೃತಪಟ್ಟ ದುರ್ದೈವಿ.
ಘಟನೆಯಲ್ಲಿ ಕೃಷ್ಣಾ ಮತ್ತು ಉಮೇಶ ಎನ್ನುವವರಿಗೆ ಗಂಭೀರ ಗಾಯಗಳಾಗಿದ್ದು, ಕೂಡಲೇ ಅವರನ್ನು ಚಿತ್ತಾಪುರ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ, ಹೆಚ್ಚಿನ ಚಿಕಿತ್ಸೆಗಾಗಿ ಕಲಬುರಗಿ ಜಿಲ್ಲಾಸ್ಪತ್ರೆಗೆ ಕಳುಹಿಸಲಾಗಿದೆ ಎಂದು ತಿಳಿದು ಬಂದಿದೆ.
ಸೇಡಂನಿಂದ ಚಿತ್ತಾಪುರಕ್ಕೆ ಬರುವಾಗ ಈ ಘಟನೆ ನಡೆದಿದೆ ಎನ್ನಲಾಗಿದೆ.
ಸುದ್ದಿ ತಿಳಿಯುತ್ತಿದ್ದಂತೆ ಡಿವೈಎಸ್ಪಿ ಶಂಕರಗೌಡ ಪಾಟೀಲ್, ಸಿಪಿಐ ಜಗದೇವಪ್ಪ ಪಾಳಾ, ಪಿಎಸ್ಐ ಚೇತನ್, ಸಿಬ್ಬಂದಿಗಳಾದ ಕಮಲಾಕರ್, ಪ್ರಶಾಂತ, ಮಾಳಗೊಂಡ, ರಮೇಶ ಅವರು ಭೇಟಿ ನೀಡಿ ಪರೀಶಿಲನೆ ನಡೆಸಿದರು.
ಈ ಕುರಿತು ಮಾಡಬೂಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.














