ಕಾನ್ಪುರ: ಚಾಲಕನ ನಿಯಂತ್ರಣ ತಪ್ಪಿದ ಕಾರೊಂದು ಚರಂಡಿಗೆ ಪಲ್ಟಿಯಾದ ಪರಿಣಾಮ ಆರು ಮಂದಿ ಮೃತಪಟ್ಟು ಇಬ್ಬರು ಮಕ್ಕಳು ಗಾಯಗೊಂಡಿರುವ ಘಟನೆ ಕಾನ್ಪುರದಲ್ಲಿ ನಡೆದಿದೆ.
ಮದುವೆ ಸಮಾರಂಭದ ಪೂರ್ವಭಾವಿಯಾಗಿ ನಡೆದ ತಿಲಕ ಸಮಾರಂಭದಲ್ಲಿ ಭಾಗಿಯಾಗಿ ಬಳಿಕ ಕಾನ್ಪುರದ ಶಿವರಾಜಪುರಕ್ಕೆ ಕಾರಿನಲ್ಲಿ ಹಿಂತಿರುಗುತ್ತಿದ್ದ ವೇಳೆ ಸಿಕಂದರಾ ಪೊಲೀಸ್ ಠಾಣೆ ವ್ಯಾಪ್ತಿಯ ಜಗನ್ನಾಥಪುರ ಗ್ರಾಮದ ಬಳಿ ಮಳೆ ಹಾಗೂ ದಟ್ಟ ಮಂಜಿನಿಂದ ಆವರಿಸಿದ ಪರಿಣಾಮ ಚಾಲಕನ ನಿಯಂತ್ರಣ ತಪ್ಪಿದ ಕಾರು ಚರಂಡಿಗೆ ಪಲ್ಟಿಯಾಗಿದೆ.
ಘಟನೆ ನಡೆದ ಕೂಡಲೇ ಸ್ಥಳೀಯರು ತೆರಳಿ ರಕ್ಷಣಾ ಕಾರ್ಯಾಚರಣೆ ನಡೆಸಿದ್ದಾರೆ ಅಲ್ಲದೆ ಪೊಲೀಸ್ ಠಾಣೆಗೂ ಮಾಹಿತಿ ನೀಡಿದ್ದಾರೆ ವಿಚಾರ ತಿಳಿದ ಕೂಡಲೇ ಸ್ಥಳಕ್ಕಾಗಮಿಸಿದ ಪೊಲೀಸರು ಮೃತದೇಹಗಳನ್ನು ಮರಣೋತ್ತರ ಪರೀಕ್ಷೆ ನಡೆಸಲು ಆಸ್ಪತ್ರೆಗೆ ಸಾಗಿಸಿದ್ದು ಗಾಯಗೊಂಡ ಇಬ್ಬರು ಮಕ್ಕಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಹೇಳಿದ್ದಾರೆ.
ಘಟನೆಯಲ್ಲಿ ಮೃತಪಟ್ಟ ಆರು ಮಂದಿ ದೇರಾಪುರ ಮತ್ತು ಶಿವರಾಜಪುರ ನಿವಾಸಿಗಳು ಎಂದು ಗುರುತಿಸಲಾಗಿದೆ.
ಕಾನ್ಪುರ ದೇಹತ್ ನಲ್ಲಿ ನಡೆದ ಭೀಕರ ರಸ್ತೆ ಅಪಘಾತದ ಬಗ್ಗೆ ಮುಖ್ಯಮಂತ್ರಿ ಯೋಗಿ ಸಂತಾಪ ಸೂಚಿಸಿದ್ದಾರೆ. ಕೂಡಲೇ ಸ್ಥಳಕ್ಕೆ ಆಗಮಿಸಿ ಪರಿಹಾರ ಕಾರ್ಯ ಚುರುಕುಗೊಳಿಸುವಂತೆ ಮುಖ್ಯಮಂತ್ರಿಗಳು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಇದಲ್ಲದೇ ಗಾಯಾಳುಗಳಿಗೆ ಸೂಕ್ತ ಚಿಕಿತ್ಸೆ ನೀಡುವಂತೆ ಸೂಚನೆ ನೀಡಿದ್ದಾರೆ.