ನೆಲಮಂಗಲ : ತುಮಕೂರು ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಗುಂಡಿ ತಪ್ಪಿಸಲು ಹೋಗಿ ಕಾರು ಎರಡು ಪಲ್ಟಿಯಾಗಿರುವ ಘಟನೆ ಬೆಂಗಳೂರು ಹೊರವಲಯ ನೆಲಮಂಗಲ ನಗರದ ಕುಣಿಗಲ್ ಬೈಪಾಸ್ ಫ್ಲೈಓವರ್ ರಸ್ತೆಯಲ್ಲಿ ನಡೆದಿದೆ.
ಕಾರಿನಲ್ಲಿದ್ದ ಆರು ಮಂದಿ ಪವಾಡ ಎಂಬಂತೆ ಪಾರಾಗಿದ್ದು ಸಣ್ಣಪುಟ್ಟ ಗಾಯವಾಗಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ನೆಲಮಂಗಲ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ತುಮಕೂರು ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ರಸ್ತೆಯಲ್ಲಿ ಅಪಘಾತವಾಗಿ ಸಾವು ನೋವುಗಳ ಪ್ರಕರಣಗಳು ಸಂಭವಿಸುತ್ತಲೇ ಇದ್ದರೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಹಾಗೂ ಟೋಲ್ ಕಂಪನಿಯ ನಿರ್ಲಕ್ಷ್ಯಕ್ಕೆ ಅಮಾಯಕ ಜೀವಗಳು ತೊಂದರೆ ಅನುಭವಿಸುವಂತಾಗಿದೆ.
ಇದೇ ರಸ್ತೆಯಲ್ಲಿ ಪ್ರತಿನಿತ್ಯ ಸಚಿವರು, ಶಾಸಕರು, ಅಧಿಕಾರಿಗಳು ಸಂಚಾರ ಮಾಡುತ್ತಿದ್ದು ಯಾರಿಗೂ ಅರಿವಿಗೆ ಬಾರದೇ ಇರುವುದು ನಮ್ಮ ಆಡಳಿತ ವ್ಯವಸ್ಥೆಗೆ ಹಿಡಿದ ಕನ್ನಡಿಯಾಗಿದೆ.














