ಬೆಂಗಳೂರು: ಎಟಿಎಂ ಸೆಂಟರ್‌ಗಳ ಬಳಿ ಹಣ ಡ್ರಾ ಮಾಡುವಾಗ ಅಥವಾ ಪಿನ್ ಕೋಡ್ ಬದಲಾಯಿಸುವಾಗ ಸಹಾಯಕ್ಕೆ ಬರುವ ಅಪರಿಚಿತ ವ್ಯಕ್ತಿಗಳ ಬಗ್ಗೆ ಎಚ್ಚರವಹಿಸಿ. ಇಲ್ಲವಾದರೆ, ನಿಮ್ಮ ಖಾತೆಯಲ್ಲಿರುವ ಹಣ ಕ್ಷಣಾರ್ಧದಲ್ಲೇ ವಂಚಕರು ದೋಚಲಿದ್ದಾರೆ.
ಇದೇ ಮಾದರಿಯಲ್ಲಿ ವೃದ್ಧರು ಹಾಗೂ ಅಮಾಯಕ ವ್ಯಕ್ತಿಗಳನ್ನು ಯಾಮಾರಿಸಿ ಎಟಿಎಂ ಕಾರ್ಡ್ ಬದಲಾಯಿಸಿ ಸಾವಿರಾರು ರೂ. ದೋಚಿದ ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಮೂವರು ಆರೋಪಿಗಳನ್ನು ನಗರ ಪೊಲೀಸರು ಬಂಧಿಸಿದ್ದಾರೆ.
ಚಿಕ್ಕಲ್ಲಸಂದ್ರ ನಿವಾಸಿಯೊಬ್ಬರಿಗೆ ಎಟಿಎಂ ಕಾರ್ಡನ ಪಿನ್ ನಂಬರ್ ಬದಲಾಯಿಸಿ ಕೊಡುವುದಾಗಿ ನಂಬಿಸಿ, ಎಟಿಎಂ ಕಾರ್ಡ್ ಅನ್ನೇ ಬದಲಾಯಿಸಿ 75 ಸಾವಿರ ರೂ. ದೋಚಿದ ಇಬ್ಬರು ವಂಚಕರನ್ನು ಸುಬ್ರಹ್ಮಣ್ಯಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಬಿಹಾರ ಮೂಲದ ವಿವೇಕ್ ಕುಮಾರ್(28) ಮತ್ತು ಚುನಿಲಾಲ್ ಕುಮಾರ್(24) ಬಂಧಿತರು.
ಆರೋಪಿಗಳಿಂದ ವಿವಿಧ ಬ್ಯಾಂಕ್‌ಗಳ 37 ಎಟಿಎಂ ಕಾರ್ಡ್‌ಗಳು ಹಾಗೂ 7500 ರೂ. ನಗದು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ಹೇಳಿದರು.
ದೂರುದಾರರ ಉತ್ತರಹಳ್ಳಿಯಲ್ಲಿರುವ ಬ್ಯಾಂಕ್ ಖಾತೆಗೆ 1.50 ಲಕ್ಷ ರೂ. ಜಮೆ ಆಗಿತ್ತು. ಬಳಿಕ ಪಕ್ಕದಲ್ಲೇ ಇರುವ ಎಟಿಎಂ ಕೇಂದ್ರಕ್ಕೆ ಹೋಗಿ, ಪಿನ್ ಕೋಡ್ ಬದಲಾವಣೆಗೆ ಮುಂದಾಗಿದ್ದಾರೆ. ಆದರೆ, ಕೆಲ ತಾಂತ್ರಿಕ ಕಾರಣಗಳಿಂದ ಸಾಧ್ಯವಾಗಿಲ್ಲ. ಆಗ ಅಲ್ಲೇ ಇದ್ದ ಆರೋಪಿಗಳು ಸಹಾಯ ಮಾಡುವುದಾಗಿ ದೂರುದಾರ ಎಟಿಎಂ ಕಾರ್ಡ್ ಪಡೆದುಕೊಂಡು, ಪಿನ್ ನಂಬರ್ ಕೂಡ ಬದಲಾಯಿಸಿದ್ದಾರೆ. ಆ ನಂತರ ಅವರ ಗಮನ ಬೇರೆಡೆ ಸೆಳೆದು ದೂರುದಾರ ಎಟಿಎಂ ಕಾರ್ಡ್ ಬದಲಿಗೆ, ತಮ್ಮ ಬಳಿಯಿದ್ದ ಇದ್ದ ನಕಲಿ ಎಟಿಎಂ ಕಾರ್ಡ್ ನೀಡಿದ್ದಾರೆ. ಅದನ್ನು ನಂಬಿದ ದೂರುದಾರ ಮನೆಗೆ ಬಂದಿದ್ದಾರೆ. ಅಷ್ಟರಲ್ಲಿ ಆರೋಪಿಗಳು ಮತ್ತೂಂದು ಎಟಿಎಂ ಕೇಂದ್ರಕ್ಕೆ ತೆರಳಿ 75 ಸಾವಿರ ರೂ. ಡ್ರಾ ಮಾಡಿಕೊಂಡು ಪರಾರಿಯಾಗಿದ್ದಾರೆ. ಇತ್ತ ಮೊಬೈಲ್‌ಗೆ ಹಣ ಡ್ರಾ ಆಗಿರುವ ಸಂದೇಶ ಬಂದ ಬೆನ್ನಲ್ಲೇ ಎಚ್ಚೆತ್ತ ದೂರುದಾರ ಬ್ಯಾಂಕ್‌ಗೆ ಹೋಗಿ ವಿಚಾರಿಸಿದಾಗ 75 ಸಾವಿರ ರೂ.ಹಣ ಡ್ರಾ ಆಗಿರುವುದು ಗೊತ್ತಾಗಿದೆ. ಬಳಿಕ ಬ್ಯಾಂಕ್ ಖಾತೆ ಸ್ಥಗಿತಗೊಳಿಸಿದ್ದರು. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ತಾಂತ್ರಿಕ ತನಿಖೆ ನಡೆಸಿದಾಗ ಆರೋಪಿಗಳ ಬಗ್ಗೆ ಮಾಹಿತಿ ಸಿಕ್ಕಿತ್ತು. ಈ ಹಿನ್ನೆಲೆಯಲ್ಲಿ ಎಟಿಎಂ ಕೇಂದ್ರದ ಬಳಿಯೇ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದರು. ಸುಬ್ರಹ್ಮಣ್ಯಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಣ ಡ್ರಾ ಮಾಡಿಕೊಡುತ್ತೇನೆಂದು ವಂಚನೆ: ಮತ್ತೂಂದು ಪ್ರಕರಣದಲ್ಲಿ ಎಟಿಎಂ ಕೇಂದ್ರಕ್ಕೆ ಬಂದಿದ್ದ ವ್ಯಕ್ತಿಯೊಬ್ಬರಿಗೆ ಹಣ ಡ್ರಾ ಮಾಡಿಕೊಡುವ ನೆಪದಲ್ಲಿ ಎಟಿಎಂ ಕಾರ್ಡ್ ಬದಲಾಯಿಸಿ ಸಾವಿರಾರು ರೂ. ವಂಚಿಸಿದ್ದ ಆರೋಪಿಯನ್ನು ಬೇಗೂರು ಠಾಣೆ ಪೊಲೀಸರು ಬಂಧಿಸಿದ್ದಾರೆ.
ಶಿವಮೊಗ್ಗ ಮೂಲದ ಸಾಗರ್ ಅಲಿಯಾಸ್ ದಡಿಯ ದೀಪಕ್(32) ಬಂಧಿತ. ಆರೋಪಿಯಿಂದ 32 ನಕಲಿ ಎಟಿಎಂ ಕಾರ್ಡ್‌ಗಳು ಹಾಗೂ 4 ಸಾವಿರ ರೂ. ನಗದು ವಶಕ್ಕೆ ಪಡೆಯಲಾಗಿದೆ. ಆರೋಪಿಯ ವಿರುದ್ಧ ಈ ಹಿಂದೆ ಉಪ್ಪಾರಪೇಟೆ ಮತ್ತು ಚಂದ್ರಾಲೇಔಟ್ ಠಾಣೆಯಲ್ಲಿ ಇದೇ ರೀತಿಯ ವಂಚನೆ ಆರೋಪದಡಿ ಪ್ರಕರಣಗಳು ದಾಖಲಾಗಿದ್ದು, ಜೈಲು ಸೇರಿದ್ದ. ಇದೀಗ ಬಿಡುಗಡೆಯಾಗಿ ಬಂದು ಮತ್ತೆ ಅದೇ ಕೃತ್ಯದಲ್ಲಿ ತೊಡಗಿದ್ದಾನೆ ಎಂದು ಪೊಲೀಸರು ಹೇಳಿದರು.
2023ರ ಆ.31ರಂದು ಠಾಣೆ ವ್ಯಾಪ್ತಿಯಲ್ಲಿರುವ ಎಟಿಎಂ ಕೇಂದ್ರಕ್ಕೆ ಬಂದಿದ್ದ ದೂರುದಾರ ಹಣ ಡ್ರಾ ಮಾಡಲು ಮುಂದಾಗಿದ್ದಾರೆ. ಆದರೆ, ಸಾಧ್ಯವಾಗಿಲ್ಲ. ಆಗ ಅಲ್ಲೇ ಇದ್ದ ಆರೋಪಿ ಹಣ ಡ್ರಾ ಮಾಡಿಕೊಡುವುದಾಗಿ ನಂಬಿಸಿ ಕಾರ್ಡ್ ಮತ್ತು ಪಿನ್ ಕೋಡ್ ಪಡೆದುಕೊಂಡಿದ್ದಾನೆ. ಆ ನಂತರ ತಪ್ಪು ಪಿನ್ ಕೋಡ್ ನೋಂದಾಯಿಸಿ, ಹಣ ಬರುತ್ತಿಲ್ಲ. ಮತ್ತೂಂದು ಎಟಿಎಂ ಕೇಂದ್ರಕ್ಕೆ ಹೋಗಿ ಎಂದು, ಅವರ ಗಮನ ಬೇರೆಡೆ ಸೆಳೆದು ತನ್ನ ಬಳಿಯಿದ್ದ ನಕಲಿ ಕಾರ್ಡ್ ನೀಡಿ ಕಳುಹಿಸಿದ್ದ. ಅದೇ ದಿನ ದೂರುದಾರರ ಖಾತೆಯಿಂದ 61.500 ರೂ. ಡ್ರಾ ಮಾಡಿಕೊಂಡಿದ್ದಾನೆ. ಈ ಬಗ್ಗೆ ದೂರು ದಾಖಲಾಗಿತ್ತು.
ಶಿವಮೊಗ್ಗದಿಂದ ಬಂದು ಲಾಡ್ಜ್ ಗಳಲ್ಲಿ ತಂಗಿದ್ದ : ಎಸ್‌ಎಸ್‌ಎಲ್‌ಸಿ ವ್ಯಾಸಂಗ ಮಾಡಿರುವ ಆರೋಪಿ ದೀಪಕ್, ಶಿವಮೊಗ್ಗದಿಂದ ನಗರಕ್ಕೆ ಬಂದು ಕೆಲ ಲಾಡ್ಜ್ ಗಳಲ್ಲಿ ಉಳಿದುಕೊಳ್ಳುತ್ತಿದ್ದ. ಕೆಲ ಎಟಿಎಂ ಕೇಂದ್ರಗಳ ಬಳಿ ನಿಂತುಕೊಳ್ಳುತ್ತಿದ್ದ. ಈ ವೇಳೆ ಕೇಂದ್ರಕ್ಕೆ ಬರುವ ವೃದ್ಧರು ಹಾಗೂ ಅಮಾಯಕರಿಗೆ ಎಟಿಎಂ ಕಾರ್ಡ್ ಪಿನ್ ನಂಬರ್ ಬದಲಾವಣೆ ಹಾಗೂ ಹಣ ಡ್ರಾ ಮಾಡಿಕೊಡುತ್ತೇನೆ ಎಂದು ನಂಬಿಸಿ ಕಾರ್ಡ್‌ಗಳ ಪಡೆಯುತ್ತಿದ್ದ. ಬಳಿಕ ಅಸಲಿ ಕಾರ್ಡ್‌ಗಳ ಬಳಸಿ ಹಣ ಡ್ರಾ ಮಾಡಿಕೊಂಡು ಪರಾರಿಯಾಗುತ್ತಿದ್ದ ಎಂದು ಪೊಲೀಸರು ಹೇಳಿದರು.