ಮನೆ ಸ್ಥಳೀಯ ಅತ್ಯುತ್ತಮವಾಗಿ ಸ್ವೀಪ್ ಚಟುವಟಿಕೆ ಕೈಗೊಳ್ಳಿ: ಪಿ.ಎಸ್.ವಸ್ತ್ರದ್

ಅತ್ಯುತ್ತಮವಾಗಿ ಸ್ವೀಪ್ ಚಟುವಟಿಕೆ ಕೈಗೊಳ್ಳಿ: ಪಿ.ಎಸ್.ವಸ್ತ್ರದ್

0

ಮೈಸೂರು: ಮತದಾನ ಶೇಖಡವಾರು ಪ್ರಮಾಣವನ್ನು ಹೆಚ್ಚಿಸುವ ಸಲುವಾಗಿ ಅತ್ಯುತ್ತಮವಾಗಿ ಸ್ವೀಪ್ ಚಟುವಟಿಕೆ ಕೈಗೊಂಡು ಮತದಾರರಿಗೆ ಜಾಗೃತಿ ಮೂಡಿಸಿ ಎಂದು ರಾಜ್ಯ ಸ್ವೀಪ್ ನೋಡೆಲ್ ಅಧಿಕಾರಿ ಪಿ.ಎಸ್.ವಸ್ತ್ರದ್ ಅವರು ತಿಳಿಸಿದರು‌.

ಲೋಕಸಭಾ ಚುನಾವಣೆ ಹಿನ್ನೆಲೆ ಸ್ವೀಪ್ ಚಟುವಟಿಕೆ ಸಂಬಂಧ ಮೈಸೂರು ತಾಲ್ಲೂಕು ಪಂಚಾಯತ್ ಸಭಾಂಗಣದಲ್ಲಿ ತಾಲ್ಲೂಕು ಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳೊಂದಿಗೆ ಬುಧವಾರ ನಡೆದ ಸಭೆಯಲ್ಲಿ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಚುನಾವಣೆ ಕುರಿತು ಜನರಿಗೆ ಜಾಗೃತಿ ಮೂಡಿಸುವುದು ಹಾಗೂ ಮತದಾನ ಪ್ರಕ್ರಿಯೆಯಲ್ಲಿ ಜನರಿಗೆ ಇರುವ ಗೊಂದಲವನ್ನು ಬಗೆಹರಿಸುವುದಕ್ಕೆ ಚುನಾವಣೆಗೂ ಮುನ್ನ ಹಮ್ಮಿಕೊಳ್ಳುವ ಸ್ವೀಪ್ ಚಟುವಟಿಕೆಯನ್ನು ಪರಿಣಾಮಕಾರಿಯಾಗಿ ಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಸಂಘ ಸಂಸ್ಥೆಗಳನ್ನು ಸಹಯೋಗದೊಂದಿಗೆ ಮತದಾನ ಜಾಗೃತಿ ಕಾರ್ಯಕ್ರಮ ಆಯೋಜಿಸಬೇಕು. ಯಾವ ಮತಗಟ್ಟೆಯಲ್ಲಿ ಮತದಾನ ಪ್ರಮಾಣ ಕಡಿಮೆ ಇದೆ ಎಂದು ಪರಿಶೀಲಿಸಿ ಆ ಮತಗಟ್ಟೆ ವ್ಯಾಪ್ತಿಯಲ್ಲಿ ಹೆಚ್ಚಿನ ಅರಿವು ಮೂಡಿಸಲು ಯೋಜನೆ ರೂಪಿಸಬೇಕು. ವಲಸಿಗರು, ಆದಿವಾಸಿಗಳು, ಕೂಲಿ ಕಾರ್ಮಿಕರು, ವಿಶೇಷಚೇತನರು ಸೇರಿದಂತೆ ಎಲ್ಲರೂ ಮತದಾನ ಮಾಡಲು ಉತ್ತೇಜಿಸಬೇಕು ಎಂದು ಹೇಳಿದರು.

ವಿದ್ಯುನ್ಮಾನ ಮತಯಂತ್ರ (ಇವಿಎಂ) ಕುರಿತು ಬಹಳಷ್ಟು ಜನರಿಗೆ ಗೊಂದಲವಿರುತ್ತದೆ. ಈ ಬಗ್ಗೆ ಪ್ರಾತ್ಯಕ್ಷಿಕೆ ಮೂಲಕ ಬಗೆಹರಿಸಿ ಮತಯಂತ್ರಗಳ ಕಾರ್ಯವೈಖರಿ ಕುರಿತು ವಿವರಿಸಬೇಕು. ಪ್ರಜಾಪ್ರಭುತ್ವ ವ್ಯವಸ್ಥೆಯ ಪ್ರಮುಖ ಘಟ್ಟವಾಗಿರುವ ಚುನಾವಣೆ ಪ್ರಕ್ರಿಯೆಯಲ್ಲಿ ಪ್ರತಿಯೊಬ್ಬರೂ ಭಾಗವಹಿಸುವಂತೆ ಪ್ರೇರೆಪಿಸಬೇಕು ಎಂದರು. 

ತಾಲ್ಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಎಂ.ಎಸ್.ಗಿರಿಧರ್ ಅವರು ಮಾತನಾಡಿ, ತಾಲ್ಲೂಕಿನ ವ್ಯಾಪ್ತಿಯಲ್ಲಿರುವ ಎಲ್ಲಾ ಪದವಿ ಪೂರ್ವ ಕಾಲೇಜುಗಳಿಗೆ ಭೇಟಿ ನೀಡಿ 18 ವರ್ಷ ಮೇಲ್ಪಟ್ಟ ಯುವಜನರು ಮತದಾರರ ಪಟ್ಟಿಗೆ ತಮ್ಮ ಹೆಸರು ಸೇರ್ಪಡಿಸುವಂತೆ ಸೂಕ್ತ ಮಾಹಿತಿ ಒದಗಿಸಿ ಮನವರಿಕೆ ಮಾಡಲಾಗಿದೆ. ಅಲ್ಲದೇ ಮನೆ ಮನೆಗೆ ಭೇಟಿ ನೀಡಿ ಮತದಾರರ ಪಟ್ಟಿಗೆ ಹೆಸರು ಸೇರ್ಪಡೆಗೆ ಕ್ರಮವಹಿಸಲಾಗಿದೆ ಎಂದು ಮಾಹಿತಿ ನೀಡಿದರು‌.

ಸಭೆಯಲ್ಲಿ ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕರು, ಪದವಿ ಕಾಲೇಜು ಶಿಕ್ಷಣ ಇಲಾಖೆಯ ಉಪನಿರ್ದೇಶಕರು ಸೇರಿದಂತೆ ತಾಲ್ಲೂಕು ಮಟ್ಟದ ಅಧಿಕಾರಿಗಳು ಹಾಜರಿದ್ದರು.

  • ಟ್ಯಾಗ್ಗಳು
  • Mysore
ಹಿಂದಿನ ಲೇಖನಸಂಸತ್‌ ಭದ್ರತಾ ಲೋಪ; ಪ್ರತಾಪ್‌ ಸಿಂಹ ಕಚೇರಿ ಮುಂದೆ ಪ್ರತಿಭಟನೆ
ಮುಂದಿನ ಲೇಖನಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಲು ನಿರಂತರ ಪರಿಶ್ರಮ, ಶಿಸ್ತು, ಬದ್ಧತೆ ಮುಖ್ಯ: ಕೆ ಲಕ್ಷ್ಮೀ ಪ್ರಿಯಾ