ತನ್ನ ಮಗ ಇಸ್ಲಾಂಗೆ ಮತಾಂತರವಾಗುವುದನ್ನು ವಿರೋಧಿಸಿದ್ದಕ್ಕಾಗಿ ಹಿಂದೂ ವ್ಯಕ್ತಿಯನ್ನು ಕೊಲ್ಲಲು ಸಂಚು ರೂಪಿಸಿದ ಶಂಕೆ ಮೇಲೆ ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯಿದೆ (ಯುಎಪಿಎ) ಅಡಿಯಲ್ಲಿ ಪ್ರಕರಣ ಎದುರಿಸುತ್ತಿದ್ದ ಮುಸ್ಲಿಂ ವ್ಯಕ್ತಿಗೆ ಮದ್ರಾಸ್ ಹೈಕೋರ್ಟ್ ಇತ್ತೀಚೆಗೆ ಜಾಮೀನು ನೀಡಿದೆ.
[ಸದಾಮ್ ಹುಸೇನ್ ಮತ್ತು ಸರ್ಕಾರದ ಪ್ರತಿನಿಧಿಯಾಗಿ ಪೊಲೀಸ್ ಇನ್ಸ್ಪೆಕ್ಟರ್ ನಡುವಣ ಪ್ರಕರಣ].
ಮೇಲ್ಮನವಿದಾರ ಸದಾಂ ಹುಸೇನ್ ವಿರುದ್ಧ ಯಾರೊಬ್ಬರೂ ಯಾವುದೇ ದೂರು ದಾಖಲಿಸಿಲ್ಲ. ಪ್ರಕರಣದಲ್ಲಿ ಯಾರೂ ಗಾಯಗೊಂಡಿಲ್ಲ. ಆದರೆ ಆರೋಪಿಗಳಿಗೆ ಜಾಮೀನು ನಿರಾಕರಿಸಲೆಂದು ಯುಎಪಿಎ ಅಡಿ ಪ್ರಕರಣ ದಾಖಲಿಸಲಾಗಿದೆ ಎಂದು ನ್ಯಾಯಮೂರ್ತಿಗಳಾದ ಎಸ್ ವೈದ್ಯನಾಥನ್ ಮತ್ತು ಎ ಡಿ ಜಗದೀಶ್ ಚಂದಿರ ಅವರಿದ್ದ ಪೀಠ ಅಭಿಪ್ರಾಯಪಟ್ಟಿತು.
ತನ್ನ ಮಗ ಇಸ್ಲಾಂಗೆ ಮತಾಂತರವಾಗುವುದನ್ನು ವಿರೋಧಿಸಿದ ಕಾರಣ ಕುಮರೇಶ್ ಎಂಬಾತನನ್ನು ಕೊಲ್ಲಲು ಮೇಲ್ಮನವಿದಾರ ಸದಾಂ ಹುಸೇನ್ ಬಯಸಿದ್ದನೆಂಬ ಆರೋಪಗಳು ಯುಎಪಿಎ ಕಾಯಿದೆಯಡಿ ಭಯೋತ್ಪಾದಕ ಚಟುವಟಿಕೆಯಾಗುವುದಿಲ್ಲ. ಮೇಲ್ಮನವಿದಾರರ ವಿರುದ್ಧದ ಆರೋಪಗಳು ಮೇಲ್ನೋಟಕ್ಕೆ ನಿಜವೆಂದು ನಂಬುವ ಯಾವುದೇ ಸಮಂಜಸ ಆಧಾರಗಳಿಲ್ಲ ಎಂದು ಕೂಡ ನ್ಯಾಯಾಲಯ ಹೇಳಿದೆ.
ಕುಮರೇಶನ್ ಮಗ ಮುಸ್ಲಿಂ ಹುಡುಗಿಯನ್ನು ಮದುವೆಯಾಗಿದ್ದು ಆಕೆಯ ಪೋಷಕರು ಹುಡುಗ ಇಸ್ಲಾಂಗೆ ಮತಾಂತರಗೊಳ್ಳಬೇಕೆಂದು ಬಯಸಿದ್ದರು. ಆದರೆ, ಕುಮಾರೇಶನ್ ಈ ಪ್ರಸ್ತಾಪವನ್ನು ತೀವ್ರವಾಗಿ ವಿರೋಧಿಸಿದ್ದರು. ಹೀಗಾಗಿ ಕುಮರೇಶನ್‌ನನ್ನು ಕೊಲ್ಲುವಂತೆ ಹುಡುಗಿಯ ಪೋಷಕರು ಹುಸೇನ್ ಮತ್ತು ಐಎಂಡಿಎ ಮುಖ್ಯಸ್ಥರನ್ನು ಕೊಲ್ಲುವಂತೆ ಕೇಳಿಕೊಂಡರು ಎಂಬುದು ಪೊಲೀಸರ ವಾದವಾಗಿತ್ತು.
ಕುಮಾರೇಶನ್‌ನನ್ನು ಕೊಂದು ಆತನ ಮಗನನ್ನು ಇಸ್ಲಾಂಗೆ ಪರಿವರ್ತಿಸಿ ಹಿಂದೂ ಸಮುದಾಯದ ಜನರು ಮುಸ್ಲಿಮರನ್ನು ಮದುವೆಯಾಗದಿರಿ ಮತ್ತು ಹಾಗೆ ಮದುವೆಯಾದವರನ್ನು ಮತಾಂತರಗೊಳಿಸಲಾಗುವುದು ಎಂಬ ಸಂದೇಶವನ್ನು ಸಮಾಜಕ್ಕೆ ರವಾನಿಸುವುದು ಈ ಸಂಚಿನ ಉದ್ದೇಶ ಎಂದು ಪೊಲೀಸರು ನ್ಯಾಯಾಲಯಕ್ಕೆ ಹೇಳಿದ್ದರು.
ಆದರೆ ಪೊಲೀಸರ ವಾದ ವಿರೋಧಾಭಾಸದಿಂದ ಕೂಡಿದೆ ಎಂದ ನ್ಯಾಯಾಲಯ “ಮೊದಲಿಗೆ ಐಪಿಸಿ, ಕ್ರಿಮಿನಲ್ ಕಾನೂನು ತಿದ್ದುಪಡಿ ಕಾಯಿದೆಯಡಿ ಪ್ರಕರಣ ದಾಖಲಿಸಲಾಗಿತ್ತು. ಬಳಿಕ ಶಸ್ತ್ರಾಸ್ತ್ರ ಕಾಯಿದೆ ಹಾಗೂ ಯುಎಪಿಎ ಕಾಯಿದೆಯಡಿ ಪ್ರಕರಣ ದಾಖಲಿಸಲಾಯಿತು, ಅಲ್ಲದೆ. ಎನ್‌ಐಗೆ ಪ್ರಕರಣದ ತನಿಖೆ ನಡೆಸುವುಂತೆ ಎನ್‌ಐಎಯನ್ನು ಪೊಲೀಸರು ಕೋರಿದ್ದರೂ ಅದು ಒಪ್ಪಿರಲಿಲ್ಲ” ಎಂದು ಹೇಳಿತು. ಈ ಹಿನ್ನೆಲೆಯಲ್ಲಿ ವಿವಿಧ ಷರತ್ತುಗಳನ್ನು ವಿಧಿಸಿ ₹25,000 ಶ್ಯೂರಿಟಿ ಮೇಲೆ ಮೇಲ್ಮನವಿದಾರರಿಗೆ ಜಾಮೀನು ಮಂಜೂರು ಮಾಡಿತು.














