ಬೆಂಗಳೂರು: ಚಿತ್ರದುರ್ಗ ನಗರದ ಕವಾಡಿಗರಹಟ್ಟಿಯಲ್ಲಿ ಕಲುಷಿತ ನೀರು ಕುಡಿದು ವಾಂತಿ-ಬೇಧಿಯಿಂದ ತೀವ್ರ ಅಸ್ವಸ್ಥಗೊಂಡಿದ್ದ ಐವರು ನಾಗರಿಕರು ಮೃತಪಟ್ಟು 41 ಮಂದಿ ತೀವ್ರ ಅಸ್ವಸ್ಥಕ್ಕೀಡಾಗಿರುವ ಘಟನೆಗೆ ಸಂಬಂಧಿಸಿದಂತೆ ಕರ್ನಾಟಕ ಲೋಕಾಯುಕ್ತ ಪೊಲೀಸರು ಸ್ವಯಂ ಪ್ರೇರಿತವಾಗಿ ಕೇಸು ದಾಖಲಿಸಿಕೊಂಡು ವಿಚಾರಣೆ ಆರಂಭಿಸಿದ್ದಾರೆ.
ಕುಡಿಯುವ ನೀರು ಒದಗಿಸುವಲ್ಲಿ ವಿಫಲರಾದ ಅಧಿಕಾರಿಗಳನ್ನು ಹೊಣೆಗಾರರನ್ನಾಗಿಸಿ ಘಟನೆ ಬಗ್ಗೆ ವಿವರಣೆ ಕೇಳಿದ್ದಾರೆ.
ಆಗಸ್ಟ್ 1ರಂದು ನಡೆದ ದುರ್ಘಟನೆ ಅಧಿಕಾರಿಗಳ ನಿರ್ಲಕ್ಷ್ಯದಿಂದ ನಡೆದಿದೆ ಎಂದು ಚಿತ್ರದುರ್ಗದಲ್ಲಿ ಲೋಕಾಯುಕ್ತ ಪೊಲೀಸ್ ವರಿಷ್ಠಾಧಿಕಾರಿ ಸಲ್ಲಿಸಿದ ವರದಿ ಆಧರಿಸಿ ವಿಚಾರಣೆ ಆರಂಭಿಸಿದ ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್.ಪಾಟೀಲ್ ನಿನ್ನೆ ಶುಕ್ರವಾರ ಪ್ರಕರಣ ದಾಖಲಿಸಿ ಆದೇಶ ಹೊರಡಿಸಿದ್ದಾರೆ.
ಶುದ್ಧ ಮತ್ತು ಸುರಕ್ಷಿತ ಕುಡಿಯುವ ನೀರನ್ನು ಒದಗಿಸಲು ತಕ್ಷಣ ಕ್ರಮಗಳನ್ನು ತೆಗೆದುಕೊಳ್ಳುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಪೊಲೀಸ್ ಅಧೀಕ್ಷಕರು ಸಲ್ಲಿಸಿದ ವರದಿಯನ್ನು ಉಲ್ಲೇಖಿಸಿ ಲೋಕಾಯುಕ್ತರು ನಿವಾಸಿಗಳಿಗೆ ಶುದ್ಧ ಮತ್ತು ಸುರಕ್ಷಿತ ಕುಡಿಯುವ ನೀರನ್ನು ಒದಗಿಸುವಲ್ಲಿ ಸಂಬಂಧಿಸಿದ ಅಧಿಕಾರಿಗಳ ಕಡೆಯಿಂದ ವಿಫಲವಾಗಿದೆ ಎಂದು ಕಂಡುಬರುತ್ತಿದೆ. ಸಂವಿಧಾನದ ಪರಿಚ್ಛೇದ 21 ರ ಅಡಿಯಲ್ಲಿ ಮೂಲಭೂತ ಹಕ್ಕಿನ ಉಲ್ಲಂಘನೆ ಮಾತ್ರವಲ್ಲದೆ, ಕರ್ನಾಟಕ ಲೋಕಾಯುಕ್ತ ಕಾಯಿದೆಯ ಸೆಕ್ಷನ್ 2 (10) ರಲ್ಲಿ ಇದು ಸರ್ಕಾರಿ ಅಧಿಕಾರಿಗಳ ದುರಾಡಳಿತಕ್ಕೆ ಸಮನಾಗಿರುತ್ತದೆ ಹೇಳಿದ್ದಾರೆ.