ಮನೆ ಅಪರಾಧ ಬಾರ್ ಕ್ಯಾಶಿಯರ್ ​ಗೆ ಧಮ್ಕಿ ಹಾಕಿ ಬಿಯರ್ ಬಾಟಲ್ ಕೇಸ್ ಹೊತ್ತೊಯ್ದ ಪ್ರಕರಣ: ಏಳು ಜನರ...

ಬಾರ್ ಕ್ಯಾಶಿಯರ್ ​ಗೆ ಧಮ್ಕಿ ಹಾಕಿ ಬಿಯರ್ ಬಾಟಲ್ ಕೇಸ್ ಹೊತ್ತೊಯ್ದ ಪ್ರಕರಣ: ಏಳು ಜನರ ವಿರುದ್ಧ ಎಫ್ ಐ ಆರ್

0

ಮೈಸೂರು: ಮಧ್ಯರಾತ್ರಿ ವೇಳೆ ಕಿಡಿಗೇಡಿ ಯುವಕರ ಗುಂಪೊಂದು ಮುಚ್ಚಿದ್ದ ಬಾರ್ ಅನ್ನು ಬಲವಂತವಾಗಿ ತೆಗೆಸಿ ಕ್ಯಾಶಿಯರ್​ಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ, ಕೊಲೆ ಬೆದರಿಕೆ ಹಾಕಿ ಬಿಯರ್ ಬಾಟಲ್ ಕೇಸ್ ಹೊತ್ತೊಯ್ದ ಘಟನೆ ನಂಜನಗೂಡು ತಾಲೂಕಿನ ಹುಲ್ಲಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

Join Our Whatsapp Group

ಈ ಸಂಬಂಧ ಕ್ಯಾಷಿಯರ್ ವೆಂಕಟೇಶ್ ಎಂಬುವರು ಏಳು ಜನರ ವಿರುದ್ಧ ದೂರು ನೀಡಿದ್ದಾರೆ.

ಹುಲ್ಲಹಳ್ಳಿಯಲ್ಲಿರುವ ನ್ಯೂ ಕಾರವಾನ್ ಬಾರ್​ ನಲ್ಲಿ ಫೆ. 22 ರಂದು ಈ ಘಟನೆ ನಡೆದಿದೆ. ಮಧ್ಯರಾತ್ರಿ ಬಾರ್ ಕ್ಲೋಸ್ ಮಾಡಿ ಲೆಕ್ಕ ಮಾಡಿಕೊಳ್ಳುತ್ತಿದ್ದ ಸಂದರ್ಭದಲ್ಲಿ ಕಿಶೋರ್, ಚಂದನ್ ಎಂಬುವರು ತಮ್ಮ ಸಹಚರರೊಂದಿಗೆ ಬಂದು ಅವಾಚ್ಯ ಶಬ್ದಗಳಿಂದ ನಿಂದಿಸಿ ಬಲವಂತವಾಗಿ ಶೆಟರ್ ಓಪನ್ ಮಾಡಿ ಒಳಗೆ ಪ್ರವೇಶಿಸಿದ್ದಾರೆ. ಕ್ಯಾಷ್ ಬಾಕ್ಸ್ ಮೇಲೆ ಕುಳಿತು ಧಮ್ಕಿ ಹಾಕುತ್ತಾ ಬೆದರಿಸಿ ಬಿಯರ್ ಹಾಗೂ ವಿಸ್ಕಿ ಬಾಟಲ್​ಗಳನ್ನ ಬಾಕ್ಸ್ ಒಂದಕ್ಕೆ ತುಂಬಿಕೊಂಡು ಪರಾರಿಯಾಗಿದ್ದಾರೆ. ಧಮ್ಕಿ ಹಾಕಿದ 7 ಜನರ ವಿರುದ್ಧ ಕ್ಯಾಶಿಯರ್ ವೆಂಕಟೇಶ್ ದೂರು ನೀಡಿದ್ದು, ಹುಲ್ಲಹಳ್ಳಿ ಪೊಲೀಸ್ ಠಾಣೆಯ ಪಿಎಸ್ಐ ಚೇತನ್ ಕುಮಾರ್ ಮತ್ತು ಸಿಬ್ಬಂದಿ ಪುಂಡಾಟ ತೋರಿದ ಕಿಶೋರ್ ಹಾಗೂ ಚಂದನ್ ಅವರನ್ನು ಬಂಧಿಸಿ ಜೈಲಿಗಟ್ಟಿದ್ದಾರೆ.

ದೂರು: ”ಫೆ. 22 ರಂದು ರಾತ್ರಿ 10:35ರ ವೇಳೆ ಎಂದಿನಂತೆ ಬಾರ್ ಬಾಗಿಲು ಹಾಕಿಕೊಂಡು ಒಳಗಡೆ ಲೆಕ್ಕ ಮಾಡಲಾಗುತ್ತಿತ್ತು. ಈ ವೇಳೆ ಗ್ರಾಮದ ಕಿಶೋರ್ ಮತ್ತು ಚಂದನ್ ಎಂಬುವರು​ ತಮ್ಮ ಐದು ಜನರೊಡನೆ ಬಾರ್ ಒಳಗೆ ಬಂದಿದ್ದಾರೆ. ಮುಚ್ಚಿದ್ದ ಬಾಗಿಲನ್ನು ಕೂಗಾಡುತ್ತಾ ಅತಿಕ್ರಮವಾಗಿ ಒಳ ಪ್ರವೇಶಿಸಿದ್ದಾರೆ. ಪ್ರಶ್ನಿಸಿದ್ದಕ್ಕೆ ಧಮ್ಕಿ ಹಾಕಿದ್ದಾರೆ. ಕೌಂಟರ್​ ಮೇಲೆ ಕುಳಿತುಕೊಂಡು ನನ್ನನ್ನು ಎಲ್ಲಿಗೂ ಹೋಗದಂತೆ ತಡೆದಿದ್ದಾರೆ. ಬಾಯಿಗೆ ಬಂದಂತೆ ಅಶ್ಲೀಲ ಪದಗಳನ್ನು ಬಳಸಿದ್ದಾರೆ. ಯಾರಿಗೆ ಹೇಳುತ್ತೀರಿ, ಹೇಳಿ.. ಹೇಳಿದರೆ ನಿಮ್ಮನ್ನು ಸುಮ್ಮನೇ ಬಿಡುವುದಿಲ್ಲ ಎಂದೆಲ್ಲ ಬೆದರಿಕೆ ಹಾಕಿ ನನ್ನ ಕಪಾಳಕ್ಕೂ ಹೊಡೆದಿದ್ದಾರೆ. ಚಂದನ್ ಎಂಬಾತ ನನ್ನನ್ನು ಹೆದರಿಸಿ ಬಿಯರ್​ ಮತ್ತು ವಿಸ್ಕಿ ಬಾಟಲ್​ಗಳನ್ನು ಪಡೆದು ಹಣ ಕೇಳಿದರೆ ಬಾಟಲ್​ನಿಂದಲೇ ನಿನ್ನ ತಲೆಗೆ ಹೊಡೆಯುವುದಾಗಿ ಹೇಳಿ ಬಾಕ್ಸ್​ಗೆ ಬಾಟಲ್​ಗಳನ್ನು ತುಂಬಿಕೊಂಡು ಹೋಗಿದ್ದಾನೆ. ಇವರ ಕೃತ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಕಿಡಿಗೇಡಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ” ಕ್ಯಾಶಿಯರ್​ ವೆಂಕಟೇಶ್​ ದೂರು ಪ್ರತಿಯಲ್ಲಿ ಉಲ್ಲೇಖಿಸಿದ್ದಾರೆ.